ರಾಯಚೂರು,ಏ.12(ಕ.ವಾ):- ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನ ಪ್ರತಿಶತ ಹೆಚ್ಚಳ ಮಾಡಬೇಕೆಂದು ಎನ್.ಆರ್.ಎಲ್.ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶಿವರಾಜ್ ಅವರು ಹೇಳಿದರು.
ಅವರು ಏ.12ರ ಬುಧವಾರ ಜಿಲ್ಲೆಯ ಮಾನವಿ ತಾಲೂಕಿನ ಹಿರೆಕೊಟ್ನೆಕಲ್ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಯೋಜನೆಯಡಿ ಸ್ವ ಸಹಾಯ ಗುಂಪಿನ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯಡಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸಬೇಕು. ಮತದಾನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷ ಚೇತನರು, ಹಿರಿಯ ನಾಗರಿಕರು ಮತದಾನ ಮಾಡುವಂತೆ ಕರೆ ನೀಡಿದರು.
ವಲಯ ಮೇಲ್ವಿಚಾರಕ ಸೂರತ್ ಪ್ರಸಾದ್ ಗಟ್ಟು ಅವರು ಮಾತನಾಡಿ ಈ ವರ್ಷ ಚುನಾವಣಾ ಆಯೋಗವು ಮನೆಯಲ್ಲಿಯೇ ಇದ್ದು ಮತದಾನ ಮಾಡುವ ಅವಕಾಶವನ್ನು ವಿಶೇಷ ಚೇತನರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲಾ ಸ್ವ ಸಹಾಯ ಗುಂಪಿನ ಮಹಿಳೆಯರು ಮತದಾರರ ಪ್ರತಿಜ್ಞಾವಿಧಿಯನ್ನು ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೌಡಯ್ಯ, ಅನ್ನಪೂರ್ಣೇಶ್ವರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷ ಲಕ್ಷ್ಮೀದೇವಿ , ಕಾರ್ಯದರ್ಶಿ ಪುಷ್ಪಲತಾ, ಮುಖ್ಯ ಪುಸ್ತಕ ಬರಹಗಾರರು ಸುಮಾ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಸಾವಿತ್ರಿ ಸೇರಿದಂತೆ ಮಹಿಳಾ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.