ರಾಯಚೂರು,ಏ.15(ಕವಾ):- ಸಂವಿಧಾನಾತ್ಮಾಕವಾಗಿ ಪ್ರತಿಯೊಬ್ಬರಿಗೂ ಸಮಾನವಾದ ಮತದಾನ ಹಕ್ಕು ದೊರಕಿದೆ. ಮತ ಹಕ್ಕು ಲಭಿಸಿರುವುದು ನಮ್ಮೆಲ್ಲರ ಅದೃಷ್ಟ. ಮತದಾನ ದಿನ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಎನ್.ಆರ್.ಎಲ್.ಎಮ್. ವಲಯ ಮೇಲ್ವಿಚಾರಕ ಸೂರತ್ ಪ್ರಸಾದ್ ಗಟ್ಟು ಅವರು ಹೇಳಿದರು.
ಅವರು ಏ.15ರ (ಶನಿವಾರ) ಕುರ್ಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಾನವಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನದ ಬಗ್ಗೆ ನಾವು ತಾಲೂಕಿನಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮತದಾನ ಬಗ್ಗೆ ನಿರ್ಲಕ್ಷ್ಯ ಸಲ್ಲದು. ನಿಮಗೆ ಅಭ್ಯರ್ಥಿಗಳ ಬಗ್ಗೆ ತೃಪ್ತಿ ಇಲ್ಲದಿದ್ದರೆ ನೋಟಾ ಒತ್ತುವ ಮೂಲಕ ಯಾವುದೇ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸದೆ ಇರಬಹುದು ಇಂತಹ ಒಂದು ವಿಧಾನ ಸಹ ಚುನಾವಣಾ ಆಯೋಗ ಜಾರಿಗೆ ತಂದಿದೆ ಎಂದರು.
ಮತದಾನದ ತಳಹದಿಯ ಮೇಲೆ ಪ್ರಜಾಪ್ರಭುತ್ವ ರೂಪುಗೊಂಡಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಅದಕ್ಕಾಗಿ ಮೇ 10 ರಂದು ಮತದಾನ ಮಾಡಬೇಕು 18 ವರ್ಷ ತುಂಬಿದ ಎಲ್ಲಾ ವಯಸ್ಕ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಸಾಮಾನ್ಯವಾಗಿ ಚುನಾವಣೆ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ.
ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ 10 ರಂದು ಸ್ವ ಸಹಾಯ ಗುಂಪಿನ ಮಹಿಳೆಯರು ಹಾಗೂ ಗ್ರಾಮಸ್ಥರು ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ತಿಳಿಸಿದರು. ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಮತದಾನದ ಪ್ರತಿಜ್ಞೆ ವಿಧಿ ಭೋದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಜಗದೀಶ್, ಶ್ರೀಲಕ್ಷ್ಮೀದೇವಿ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷ ಶಿವಲೀಲಾ, ಅಂಬಿಕಾ, ಪಲ್ಲವಿ, ಮುಖ್ಯ ಪುಸ್ತಕ ಬರಹಗಾರ ಜಮೀಲಾ ಬೇಗಂ, ಸಾಹರಾ ಬಾನು, ಗಂಗಮ್ಮ ಇನ್ನಿತರರು ಸೇರಿದಂತೆ ಉಪಸ್ಥಿತರಿದರು.