ರಾಯಚೂರು,ಮೇ 12 ವಿಧಾನಸಭೆ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಒಟ್ಟು ಶೇ. 4% ರಷ್ಟು ಮತದಾನದಲ್ಲಿ ಹೆಚ್ಚಾಗಿದೆ ಜಿಲ್ಲೆಯಲ್ಲಿ ಒಟ್ಟು ಶೇ.70.03% ಮತದಾನವಾಗಿದ್ದು, ಇದೀಗ ಮತ ಎಣಿಕೆಗಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಬಾರಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿದ್ದು, ಒಟ್ಟು ಶೇ.75.30% ರಷ್ಟು ಮತದಾನ ಪೂರ್ಣಗೊಂಡಿದೆ. ಅತಿ ಕಡಿಮೆ ಮತದಾನವು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಗಿದ್ದು, ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.62.01% ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 5,80,388 ಪುರುಷರು, 5,64,532 ಮಹಿಳೆಯರು ಹಾಗೂ 23 ಜನ ಇತರೆ ಮತದಾರರು ಮತದಾನ ಮಾಡಿದ್ದು ಒಟ್ಟು 16,34,989 ಮತದಾರರ ಪೈಕಿ 11,44,943 ಮತದಾರರು ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
ಎಣಿಕೆಗೆ ಸಕಲ ಸಿದ್ಧತೆ
ನಗರದ ಎಸ್ಆರ್ಪಿಎಸ್ ಪದವಿಪೂರ್ವ ಕಾಲೇಜು ಹಾಗೂ ಎಲ್.ವಿ.ಡಿ ಪದವಿ ಕಾಲೇಜಿನಲ್ಲಿ ಮತ ಎಣಿಕೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ರಾಯಚೂರು ಗ್ರಾಮೀಣ, ರಾಯಚೂರು ನಗರ ಹಾಗೂ ಮಾನವಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಳನ್ನು ಮಾಡಲಾಗುವುದು, ಉಳಿದಂತೆ ದೇವದುರ್ಗ, ಲಿಂಗಸುಗೂರು, ಸಿಂಧನೂರು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಳನ್ನು ಎಲ್.ವಿ.ಸಿ ಪದವಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಗಳಲ್ಲಿ ಒಟ್ಟು 14 ಸ್ಟ್ರಾಂಗ್ ರೂಂಗಳು, 7 ಎವಿಎಂ ಎಣಿಕೆ ಹಾಲ್ಗಳು ಮತ್ತು 2 ಅಂಚೆ ಮತಪತ್ರ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತ್ತು ಮತ ಎಣಿಕೆ ಕೆಂದ್ರಗಳಲ್ಲಿ ಭದ್ರತಾ ಹಿತದೃಷ್ಠಿಯಿಂದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಲಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಟೇಬಲ್ಗಳನ್ನು ಸ್ಥಾಪಿಸಲಾಗಿದ್ದು, 18 ಎಣಿಕೆ ಮೇಲ್ವಿಚಾರಕರು, 18 ಎಣಿಕೆ ಸಹಾಯಕರು, ಮತ್ತು 18 ಎಣಿಕೆ ವೀಕ್ಷಕರು ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 54 ಜನರನ್ನು ಮತ ಎಣಿಕೆಗಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ಮತ ಎಣಿಕೆ ಕೇಂದ್ರದ ಬಂದೋಬಸ್ತ್ ಕುರಿತು ಎ.ಎಸ್.ಪಿ- 1.ಡಿಎಸ್.ಪಿ- 2,ಪಿ,ಐ/ಸಿ.ಪಿ.ಐ-12,ಪಿ.ಎಸ್.ಐ-25,ಎ.ಎಸ್.ಐ-52,ಹೆಚ್.ಸಿ/ಪಿ.ಸಿ-350, ಹೋಮ್ ಗಾರ್ಡ್ -100ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ 3 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಬಂದೋಬಸ್ತ್ ಜಿಲ್ಲೆಯ 7 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಬಂದೋಬಸ್ತ್ ಕುರಿತು 10-ಕೇಂದ್ರ ಸಶಸ್ತ್ರ ಮೀಸಲು ಪಡೆ, 8-ಕೆ.ಎಸ್.ಆರ್.ಪಿ ತುಕಡಿ, 8-ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಹೋಮ್ಗಾರ್ಡ್-100, ಹಾಗೂ ಸಂಪೂರ್ಣ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ, ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣನವರ ಮತ್ತಿತರರು ಉಪಸ್ಥಿತರಿದ್ದರು.