ಸಿಂಧನೂರು ಜೂನ್ 27. ಜುಲೈ 1, 2023ರ ವೈದ್ಯರ ದಿನಾಚರಣೆ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದಿಂದ ಕೊಡಲ್ಪಡುವ ‘ಉತ್ತಮ ವೈದ್ಯ ಪ್ರಶಸ್ತಿ’ಗೆ ಸಿಂಧನೂರು ನಗರದ ಸಹನಾ ಮಕ್ಕಳ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞರಾದ ಡಾ.ಕೆ.ಶಿವರಾಜ ಆಯ್ಕೆ ಆಗಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ 200ಕ್ಕೂ ಹೆಚ್ಚು ಶಾಖೆಗಳಿಂದ 25 ಸಾವಿರಕ್ಕೂ ಹೆಚ್ಚು ವೈದ್ಯರುಗಳ ವೈಯಕ್ತಿಕ ಸಾಧನೆ, ಸಮುದಾಯಕ್ಕೆ ವೈದ್ಯರ ಕೊಡುಗೆಯನ್ನು ಭಾರತೀಯ ವೈದ್ಯಕೀಯ ಸಂಘ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಿಂದ ಮಕ್ಕಳ ವೈದ್ಯರಲ್ಲಿ ಡಾ.ಶಿವರಾಜ ಅವರೊಬ್ಬರೇ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದ ಡಾ.ಬಸವರಾಜೇಂದ್ರ ಸಭಾಂಗಣದಲ್ಲಿ ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.