ಸಿಂಧನೂರು ಜುಲೈ. 07 ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಜುಲೈ 8 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಟೌನ್ ಹಾಲ್ನಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಸಂಘ-ಸಂಸ್ಥೆಗಳ ಮುಖಂಡರ ಸಾರ್ವಜನಿಕರ ಸಭೆ ಕರೆಯಲಾಗಿದೆ.
ಏಷ್ಯಾ ಖಂಡ ದಲ್ಲಿಯೇ ಟ್ರ್ಯಾಕ್ಟರ್ ಮಾರಾಟದಲ್ಲಿಯೇ ಮೊದಲ ಸ್ಥಾನದಲ್ಲಿದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಂಧನೂರು ತಾಲ್ಲೂಕು ಅತೀ ವೇಗವಾಗಿ ಬೆಳೆಯುತ್ತಿದೆ.ತುಂಗಭದ್ರಾ ಹಾಗೂ ಕೃಷ್ಣ ಜಲಾಶಯ ಹೊಂದಿ ಅಧಿಕ ಪ್ರಮಾಣದಲ್ಲಿ ಭತ್ತ ಬೆಳೆಯುವ ಭತ್ತದ ನಾಡಾಗಿದೆ. ಆದರೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲಾ ಕೇಂದ್ರಗಳು ತಾಲ್ಲೂಕಿನಿಂದ ಅಂದಾಜು 90 ರಿಂದ 95 ಕಿ.ಮೀ ದೂರದಲ್ಲಿದೆ.ಸಾರ್ವಜನಿಕರ ವಿವಿಧ ಇಲಾಖೆಗಳ ಕೆಲಸಗಳಿಗೆ ರಾಯಚೂರು ಹೋಗಬೇಕು ಎಂದರೆ ತೊಂದರೆಯಾಗುತ್ತದೆ.
ಆದ್ದರಿಂದಲೇ ಸಿಂಧನೂರು ತಾಲ್ಲೂಕನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬುದು ಸಾರ್ವಜನಕರ ಒತ್ತಾಸೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿ ತೀರ್ಮಾನಿಸಲು ಜುಲೈ.8
ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಆದ್ದರಿಂದ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಉಪನ್ಯಾಸಕರು, ಮಹಿಳಾ ಪರ ಸಂಘಟಕಿಯರು, ವಿದ್ಯಾರ್ಥಿಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದ್ದಾರೆ.