ರಾಯಚೂರು ಜು ೧೪.ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ, ಆರ್.ಎಚ್.ಕ್ಯಾಂಪ್, ರೌಡಕುಂದ ಮತ್ತು ಸೋಮಲಾಪೂರು ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಭೇಟಿ ನೀಡಿ ನರೇಗಾ, ಜಲಜೀವನ ಮಿಷನ್ ಮತ್ತು ಪಿ.ಆರ್.ಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಮೊದಲಿಗೆ ಜವಳಗೇರಾ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ನಾಲಾ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರೊಂದಿಗೆ ಕೆಲಸ ನಿರ್ವಹಿಸುವ ಬಗ್ಗೆ ಮತ್ತು ಕೂಲಿ ಮೊತ್ತ ಪಾವತಿಸುವ ಬಗ್ಗೆ ಚರ್ಚೆ ನಡೆಸಿ, ಸಕಾಲಕ್ಕೆ ಕೆಲಸ ನೀಡುತ್ತಾರೆಯೇ ಎನ್ನುವದನ್ನು ಕೂಲಿಕಾರರೊಂದಿಗೆ ಸಮಲೋಚಿಸಿ ಮಾಹಿತಿ ಪಡೆದುಕೊಂಡರು.
ಜಲಾಧಾರೆ ಪೈಪ್ ಲೈನ್ ಕಾಮಗಾರಿ ಮತ್ತು ಎಂವಿಎಸ್ ಹಾಗೂ ಕುಡಿಯುವ ನೀರಿನ ಒವರ್ ಟ್ಯಾಂಕ್ನ್ನು ಪರಿಶೀಲಿಸಿ ಟ್ಯಾಂಕ್ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು ಮತ್ತು ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ನಿಗಾವಹಿಸಬೇಕು ಎಂದರು.
ಬಾಲಯ್ಯ ಕ್ಯಾಂಪ್ನಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಳದ ಸಂಪರ್ಕ ಕಲ್ಪಿಸಿರುವದನ್ನು ಸ್ವತಃ ಪರಿಶೀಲಿಸಿ, ನೀರು ಬರುತ್ತಿವೆಯೇ ಇಲ್ಲ ಎನ್ನವುದನ್ನು ಗ್ರಾಮಸ್ಥರನ್ನು ಕೇಳಿ ಮಾಹಿತಿ ಪಡೆದುಕೊಂಡರು. ನರೇಗಾದಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಬಿಸಿಯೂಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಾಕಿಯಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಬಂಧಿಸಿದವರೆಗೆ ಸೂಚಿಸಿದರು.
ಆರ್.ಎಚ್.ಕ್ಯಾಂಪ್ ನಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಳದ ಸಂಪರ್ಕ ಕಲ್ಪಿಸಿರುವದನ್ನು ಪರಿಶೀಲಿಸಿದರು. ರೌಡಕುಂದಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಯವರೊಂದಿಗೆ ಕಡತಗಳ ನಿರ್ವಹಣೆ ಮತ್ತು ರಾಜ್ಯ ಸರಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಹೆಚ್ಚು ಹೆಚ್ಚು ಫಲಾನುಭವಿಗಳ ಹೆಸರು ನೊಂದಾಯಿಸಬೇಕು. ಅಮೃತ ಸರೋವರ ಯೋಜನೆಯಡಿ ನಿರ್ಮಾಣ ಮಾಡಿರುವ ಕೆರೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನಂತರ ಬಿಸಿಯೂಟ ಕೋಣೆಯಲ್ಲಿರುವ ದಾಸ್ತನು ಕೊಠಡಿಯಲ್ಲಿ ಧವಸ ಧಾನ್ಯಗಳನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರ ಪರಿಶೀಲಿಸಿದರು. ಶಾಲಾ ಕಂಪೌಂಡ ವೀಕ್ಷಣೆ ಮಾಡಿದರು. ಶಾಲಾಯಲ್ಲಿರುವ ಕಛೇರಿಗೆ ತೆರಳಿ ಹಾಜರಾತಿಯನ್ನು ಪರಿವೀಕ್ಷಣೆ ಮಾಡಿದರು. ನಂತರ ಸೋಮಲಾಪೂರು ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಗೋಕಟ್ಟೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಕೂಲಿಕಾರರೊಂದಿಗೆ ಸ್ಥಳದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಸಾಸಲಿಮರ ಕ್ಯಾಂಪ್ನಲ್ಲಿ ಜಲಜೀವನ ಮೀಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಸಂಪರ್ಕವನ್ನು ಗುಣಮಟ್ಟವನ್ನು ಪರಿಶೀಲಿಸಿ, ನಳದೊಳಗೆ ನೀರು ಬರುವುದನ್ನು ಖಾತ್ರಿಪಡಿಸಿಕೊಂಡರು. ನಂತರ ಕ್ಯಾಂಪ್ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ ಪ್ರತಿಯೊಂದು ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಸಹಾಯಕ ನಿರ್ದೇಶಕರು (ಗ್ರಾ.ಉ) ಮನೋಹರ, ಪಿ.ಆರ್.ಇ.ಡಿ ಕಾರ್ಯನಿರ್ವಾಹಕ ಅಭಿಯಂತರರು ಶಿವಪ್ಪ ಮತ್ತು ಗ್ರಾ.ಮೀ.ಕು ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಐಇಸಿ ಸಂಯೋಜಕರು ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.