ರಾಯಚೂರು,ಜು.೨೪ ಜಿಲ್ಲೆಯಾದ್ಯಂತ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬವನ್ನು ಜು.೧೯ ರಿಂದ ೨೯ ರವರಿಗೆ ಒಟ್ಟು ೧೦ ದಿನಗಳ ಕಾಲ ಅತಿ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಒಟ್ಟು ೦೭ ತಾಲೂಕುಗಳ ವಿವಿಧ ನಗರ, ಪಟ್ಟಣ, ಗ್ರಾಮಗಳು ಸೇರಿದಂತೆ ಒಟ್ಟು ೬೪೪ ಸ್ಥಳಗಳಲ್ಲಿ ಪಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಜು.೨೮ ರಂದು ಖತ್ತಲ್ ರಾತ್ರಿ ಆಲಂ ಪಂಚಾಗಳ ಸವಾರಿ, ಜು.೨೯ರಂದು ಮೊಹರಂ ಹಬ್ಬದ ಕೊನೆಯ ದಿನದ ದಫನ್ ಮೆರವಣಿಗೆಗಳು ನಡೆಯಲಿದ್ದು ಸಾರ್ವಜನಿಕರು ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ, ಲಿಂಗಸೂಗೂರು ತಾಲೂಕುಗಳ ಒಟ್ಟು ೧೯ ಗ್ರಾಮಗಳಲ್ಲಿ ಈ ಹಿಂದೆ ಮೊಹರಂ ಹಬ್ಬದ ಸಂಧರ್ಭದಲ್ಲಿ ಅಹಿತಕರ ಘಟನೆಗಳು ನಡೆದು ಪ್ರಕರಣಗಳು ದಾಖಲಾದ ಹಾಗೂ ಪ್ರಸ್ತುತ ವರ್ಷವು ಸಹ ಮೊಹರಂ ಹಬ್ಬ ನಡೆದ್ದಲ್ಲಿ ಗಲಾಟೆಗಳು ನಡೆದು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಬಹುದಾದ ೧೮ ಹಳ್ಳಿಗಳು ಹಾಗೂ ಸಿರವಾರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿಗಳು ಸಾರ್ವಜನಿಕವಾಗಿ ಜನರು ಗುಂಪು ಗುಂಪಾಗಿ ಸೇರಿ ಮೊಹರಂ ಹಬ್ಬವನ್ನು ಆಚರಿಸುವುದನ್ನು ಹಾಗೂ ಮೆರವಣಿಗೆ ಮಾಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿರುತ್ತಾರೆ.
ಮೊಹರಂ ಹಬ್ಬದ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಜು.೨೮ ರಂದು ಬೆಳಿಗ್ಗೆ ೦೬.೦೦ ಗಂಟೆಯಿಂದ ಜು.೩೦ರ ಬೆಳಿಗ್ಗೆ ೦೬.೦೦ ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿರುತ್ತಾರೆ.
ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಮೊಹರಂ ಬಂದೋಬಸ್ತ್ ಕುರಿತು ಎ.ಎಸ್.ಪಿ-೦೧, ಡಿ.ಎಸ್.ಪಿ-೦೪, ಪಿಐ/ಸಿ.ಪಿ.ಐ-೧೪, ಪಿ.ಎಸ್.ಐ-೪೧, ಎ.ಎಸ್.ಐ-೧೦೦, ಹೆಚ್.ಸಿ/ಪಿಸಿ-೯೦೦ ಹಾಗೂ ೧೦೦ ಜನ ಗೃಹ ರಕ್ಷಕ ಸಿಬ್ಬಂದಿ, ೯೯ ಡಿ.ಎ.ಆರ್.ಪಾರ್ಟಿ ಹಾಗೂ ೦೪ ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜನೆ ಮಾಡಿದ್ದು ಇರುತ್ತದೆ. ಸಾರ್ವಜನಿಕರು ಶಾಂತಿಯುತವಾಗಿ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.