ಮಸ್ಕಿ : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ದುರಂತಕ್ಕೀಡಾದ ಬಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಹಾಗೂ ಗಾಯಾಳುಗಳಿಗೆ ಹೆಚ್ಚಿನ ಉಚಿತ ಚಿಕಿತ್ಸೆ ನೀಡಲು ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಮಸ್ಕಿ ವತಿಯಿಂದ
ಮಾನ್ಯ ತಹಶೀಲ್ದಾರರಾದ ಡಾ.ಮಲ್ಲಪ್ಪ ಯರಗೋಳ ಮಸ್ಕಿ ಇವರ ಮುಖಾಂತರ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಈ ಘಟನೆಗೆ ಸಂಬಂಧಿಸಿದಂತೆ ಮಸ್ಕಿ ಡಿವಿಪಿ ತಾಲೂಕ ಅಧ್ಯಕ್ಷರಾದ ಮೌನೇಶ ತುಗ್ಗಲದಿನ್ನಿ ಯವರು ಮಾತನಾಡಿ ವಿದ್ಯಾರ್ಥಿ ಯುವಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳ ಮುಖೇನ ಸರ್ಕಾರ ಕಾರ್ಯೋನ್ಮುಖರಾಗಿರುವ ಹಿನ್ನೆಲೆಯಲ್ಲಿ ಕೆಲವು ಸರ್ಕಾರಿ ಸಂಸ್ಥೆಯವರ ಬೇಜವಾಬ್ದಾರಿಯಿಂದ ಮತ್ತು ದಿವ್ಯ ನಿರ್ಲಕ್ಷದಿಂದ ಅಮಾಯಕರ ಜೀವ ಮತ್ತು ಜೀವನ ಬೀದಿ ಪಾಲಾಗುತ್ತಿದೆ ಎನ್ನುವುದು ದುರಂತವೇ ಸರಿ.ಹಾಗೂ ಪ್ರತಿನಿತ್ಯ ಎಂದಿನಂತೆ ಬೆಳಗಿನ ಜಾವ ಮನೆಯಿಂದ ಶಾಲೆಗೆ ಹೋಗಿ ಸಂಜೆಯಾದರೆ ಹಿಂದಿರುಗಿ ಮನೆಗೆ ಬರುವ ತವಕದಲ್ಲಿರುತ್ತಿದ್ದ ಪುಟ್ಟ ಕಂದಮ್ಮಗಳು ಶಾಶ್ವತವಾಗಿ ಬಾರದೂರಿಗೆ ಹೋಗಿರುವ ಘಟನೆಯು ನಾವು ನೀವು ಎಂದು ಕಂಡೂ ಕೇಳರಿಯದ ಘನ ಗೋರ ಘಟನೆಯಾಗಿ ನಮ್ಮೆಲ್ಲರ ಕಣ್ಣಮುಂದೆ ಬಂದೊದಗಿದೆ ಎಂದರು.ಅಲ್ಲದೆ ಮುಂಜಾನೆ ಶಾಲೆಗೆ ಹೋಗಿರುವ ನನ್ನ ಮಗು ಇನ್ನೇನೂ ಮನೆಗೆ ಬರುವನು ಎಂದು ಕಾತುರದ ಕಣ್ಣಲ್ಲಿ ಕಾಯುತ್ತಿದ್ದ ಆ ಮುಗ್ಧ ಮಕ್ಕಳ ಪೋಷಕರು ತಮ್ಮ ಮಗು ಶವವಾಗಿ ಮನೆಗೆ ಬಂದಿರುವ ಸುದ್ದಿಯನ್ನು ಕೇಳಿ ತಮ್ಮೆದೆಗೆ ಬರಸಿಡಿಲು ಬಡಿದಂತಾಗಿ,ಆಕಾಶವೇ ಕಳಚಿ ಮುಗಿಲ ಮೇಲೆ ಬಿದ್ದಂತಾಗಿದೆ,ಇನ್ನೂ ಆ
ಮಕ್ಕಳ ತುಂಡು ತುಂಡಾದ ದೇಹವನ್ನು ಕಣ್ಣ ಮುಂದೆ ನೋಡಿದಾಗ ತಂದೆ ತಾಯಿಯರ ಆಕ್ರಂದನ,ಆರ್ತನಾದವು ಮುಗಿಲು ಮುಟ್ಟಿ,ಇಡೀ ಕುಟುಂಬ ಅಷ್ಟೆ ಅಲ್ಲದೇ ಇಡೀ ರಾಜ್ಯವೇ ಶೋಕದ ಸಾಗರದಲ್ಲಿ ಮುಳುಗಿಹೋಗಿದೆ ಎಂದು ಭಾವನಾತ್ಮಕವಾಗಿ ನುಡಿದರು.
“ಶಿಕ್ಷಕರ ದಿನಾಚರಣೆಯ ಈ ದಿನ ರಾಯಚೂರು ಜಿಲ್ಲೆಗೆ ಕರಾಳ ದಿನ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾ ನಂತರ ಮಾತನಾಡಿದ ಡಿ.ಎಸ್.ಎಸ್. ಮುಖಂಡರಾದ ಮಲ್ಲಿಕ್ ಮುರಾರಿ ಯವರು ಹೌದು! ನಿನ್ನೆಯ ದಿನ ದಿನಾಂಕ ಸೆಪ್ಟೆಂಬರ್ 05-2024ರಂದು ಶಿಕ್ಷಕರ ದಿನಾಚರಣೆ ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಲೋಯೋಲಾ ವಿದ್ಯಾ ಸಂಸ್ಥೆಯ ಖಾಸಗಿ ಬಸ್ ಹಾಗೂ ಸರ್ಕಾರಿ ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದ ಈಗಾಗಲೇ ಇಬ್ಬರು ಪುಟ್ಟ ಕಂದಮ್ಮಗಳ ಪ್ರಾಣಪಕ್ಷಿ ಹಾರಿ ಹೋಗಿ,ಇನ್ನೂ ಹಲವು ಬಾಲಕರು ಸಾವು ನೋವಿನ ಮದ್ಯೆ ಸಿಲುಕಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಸೇರಿದಂತೆ ವಿವಿಧಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನೋವಿನ ನುಡಿಗಳನ್ನಾಡಿದರು.
ತದನಂತರ ಮತ್ತೊಬ್ಬ ದಲಿತ ವಿದ್ಯಾರ್ಥಿ ಪರಿಷತ್ತಿನ ಯುವ ಮುಖಂಡರಾದ ಅಮರೇಶ್ ಭೋವಿ ಯವರು ಮಾತನಾಡಿ ಈ ಘಟನೆಗೆ ಮುಖ್ಯ ಕಾರಣ ರಸ್ತೆಯ ಮೇಲಿರುವ ಗುಂಡಿಯನ್ನು ತಪ್ಪಿಸಲು ಹೋದ ಸರ್ಕಾರಿ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಮತ್ತು
ಇತ್ತೀಚೆಗೆ ನಾನ್ ಸ್ಟಾಪ್ ಬಸ್ಸುಗಳು ತಮ್ಮ ವೇಗಮಿತಿ ಮೀರಿ ರಸ್ತೆ ಮೇಲೆ ಚಲಿಸಿ ಅಮಾಯಕರ ಜೀವ ತೆಗೆಯುತ್ತಿವೆ.ಆದ್ದರಿಂದ ಇಂತಹ ಬೇಜವಾಬ್ದಾರಿ ಚಾಲಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಮುಖ್ಯ ರಸ್ತೆಯ ಮೇಲಿನ ಗುಂಡಿಯನ್ನು ಮುಚ್ಚದೆ ಅರೆಬರೆ ರಸ್ತೆ ನಿರ್ಮಾಣ ಮಾಡಿರುವುದು ಕೂಡ ಈ ಘಟನೆಗೆ ಕಾರಣ ಎನ್ನುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಯದಾಗಿ ಈ ಪುಟ್ಟ ಕಂದಮ್ಮಗಳ ಜೀವಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ಸಾಕಷ್ಟು ನೆರವು ನೀಡಿ ಅವರಿಗೆ ಆಸರೆಯಾಗಬೇಕು,ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಬಾಲಕರ ಸಂಪೂರ್ಣ ವೆಚ್ಚವನ್ನು ಸರ್ಕಾರ ಬರಿಸಬೇಕು ಹಾಗೂ ಮುಂದೆಂದೂ ಇಂತಹ ಘಟನೆಗಳು ಆಗದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಮಿತಿ ಮಸ್ಕಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸುತ್ತಾ ಮನವಿ ಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಕಾಸಿಮಪ್ಪ ಡಿ. ಮುರಾರಿ,ಹುಸೇನಪ್ಪ ಇರಕಲ್ಲ,ಮಲ್ಲಿಕಾರ್ಜುನ ಭೋವಿ ಬಸಾಪೂರು,ಶರಣಪ್ಪ ದಿನಸಮುದ್ರ,ಪ್ರಸನ್ನ ಕಟ್ಟಿಮನಿ,ಸುದೀಪ್ ಬಸಾಪೂರು,ಅನಂತ ಬಿ,ಸುರೇಶ ಬಿ,ರಾಹುಲ್ ಮಸ್ಕಿ,ರವಿ ದೇಸಾಯಿ ಹಾಗೂ ಇನ್ನಿತರು ಪಾಲ್ಗೊಂಡಿದ್ದರು .
ವರದಿ : ಎಚ್. ಕೆ. ಬಡಿಗೇರ್