ಮಸ್ಕಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಪ್ರಮುಖ ಅಂಶವೆಂದರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣವನ್ನು ಖಚಿತಪಡಿಸುವುದು ಆಗಿರುತ್ತದೆ.ಆದರೆ ಸಿಂಧನೂರು ತಾಲೂಕಿನ ತುರ್ವಿಹಾಳ ಘಟಕದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದಕ್ಕೆ ವಿರುದ್ದವಾಗಿರುವ ಹಾಗೆ ಕಾಣುತ್ತದೆ.
ಕೇಂದ್ರದ ಕಥೆ ವ್ಯಥೆ :-
ಇದು ತಾಲೂಕಿನ ಗುಡದೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗೋನಾಳ ಗ್ರಾಮದ ಎಸ್.ಸಿ ಕಾಲೋನಿ ಅಂಗನವಾಡಿ ಕೇಂದ್ರ-1ರ ಪರಿಸ್ಥಿತಿ.ಇಂತಹ ಹಲವಾರು ಅಂಗನವಾಡಿ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯಿಂದ ಅನುದಾನ ಬರುವುದಿಲ್ಲ,ಅದರ ಬದಲಾಗಿ ಜಿಲ್ಲಾ ಪಂಚಾಯತಿಯು ಇವುಗಳ ನಿರ್ಮಾಣ,ಉಸ್ತುವಾರಿ ನೋಡಿಕೊಳ್ಳಬೇಕು.ಆದರೆ ರಾಯಚೂರು ಜಿ.ಪಂ.ಮತ್ತು ಸಂಬಂಧಪಟ್ಟ ಇಲಾಖೆಯವರು ಅಂಗನವಾಡಿಗಳ ಬಗ್ಗೆ ನಿರ್ಲಕ್ಷ್ಯ ತಾಳಿರುವುದರಿಂದ ದಿನಾಲು ವಿದ್ಯಾರ್ಥಿಗಳು,ಕಾರ್ಯಕರ್ತೆಯರು ಪ್ರತಿದಿನ ಆತಂಕದಲ್ಲಿಯೇ ಕಳೆಯಬೇಕಿದೆ,ಕಾರಣವೆನೆಂದರೆ ಇದರ ಗೋಡೆಗಳು ಬಿರುಕುಬಿಟ್ಟಿವೆ, ಮೂಲೆಮೂಲೆಗಳಲ್ಲಿ ಇಲಿಗಳು ರಾಶಿ ರಾಶಿ ಮಣ್ಣು ತೋಡುತ್ತಿದ್ದು ಪ್ರತಿದಿನವೂ ಮಣ್ಣು ಹೊರಹಾಕುವುದೇ ಕೆಲಸವಾಗಿದೆ,ಸೋರುವ ಚಾವಣಿಗಳು,ಇಲ್ಲಿ ಆಗಾಗ ಕಾಣಿಸಿಕೊಳ್ಳುವ ಹಾವು,ಚೇಳುಗಳೂ ಸೇರಿಕೊಂಡಿರುವುದರಿಂದ ಮಕ್ಕಳು ಪ್ರತಿದಿನವೂ ಅಪಾಯದಲ್ಲೇ ಕಾಲ ಕಳೆಯುತ್ತಿದ್ದಾರೆ.ಇವುಗಳ ಮದ್ಯದಲ್ಲಿಯೇ ನೆಲದ ಮೇಲೆ ಕುಳಿತುಕೊಳ್ಳುವ ಮಕ್ಕಳು,ಅವರಿಗೆ ಪಾಠ ಮಾಡುವ ಶಿಕ್ಷಕಿಯ ಪಾಡು.
ಘಟನೆ :-
ಗೋನಾಳ ಅಂಗನವಾಡಿ ಕೇಂದ್ರ 01 ರ ಒಳಗಡೆ ಎರಡು ಹಾವುಗಳು ಕಂಡು ಬಂದಿದ್ದು ಕೇಲವೇ ಕ್ಷಣಗಳಲ್ಲ ದೊಡ್ಡ ಅನಾಹುತ ತಪ್ಪಿದ್ದು ವಿಪರ್ಯಾಸವೇ ಸರಿ ಏಕೆಂದರೆ ಇಲ್ಲೇ ಈ ಎರಡು ಹಾವುಗಳು ಸುಮಾರು ದಿನಗಳಿಂದ ಮನೆ ಮಾಡಿಕೊಂಡಿರುವ ಹಾಗೆ ಕಂಡುಬಂದಿದೆ.ಇಲ್ಲಿಯ ಅಂಗನವಾಡಿ ಶಿಕ್ಷಕಿ ಮಕ್ಕಳಿಗೆ ಅಡುಗೆ ಮಾಡಲು ದವಸ ಧಾನ್ಯಗಳು ತೆಗೆದುಕೊಳ್ಳುವ ಸಂಧರ್ಭದಲ್ಲಿ ಹಾವು ಎಡೆ ಎತ್ತಿ ಕಚ್ಚಲು ಮುಂದೆ ಆಯ್ತು ಅನ್ನವಷ್ಟರಲ್ಲಿಯೇ ಇದನ್ನು ಅರಿತುಕೊಂಡ ಇವರು ಮಕ್ಕಳನ್ನು ಹೊರಗಡೆ ಕರೆದು ಹೋದರು ನಂತರದಲ್ಲಿ ಹಾವು ಹಿಡಿಯುವರಿಗೆ ಪೋನ್ ಮಾಡಿ ಕರೆಸಿಕೊಂಡು ಅವುಗಳನ್ನು ಹಿಡಿಯಲಾಯಿತು .
ಗ್ರಾಮಸ್ಥರ ಆಕ್ರೋಶ:-
ಈ ಅಂಗನವಾಡಿ ಕೇಂದ್ರವು 1993 ರಲ್ಲಿ ನಿರ್ಮಾಣವಾಗಿರುವುದರಿಂದ ಈ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದ್ದು,ಮತ್ತು ಇದು ಕಳೆದ ಐದಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ.ಚಾವಣಿಯ ಶೀಟುಗಳು ಒಡೆದಿದ್ದು,ಮಳೆ ಬಂದರೆ ನೀರು ನಿಂತುಕೊಳ್ಳುತ್ತದೆ,ಸರಿಯಾದ ವಿದ್ಯುತ್ ವ್ಯವಸ್ಥೆಯಿಲ್ಲ ಆಗಾಗಿ ಮಕ್ಕಳಿಗೆ ನೀಡಬೇಕಾದ ಆಹಾರ ಪದಾರ್ಥಗಳೆಲ್ಲವೂ ಇಲಿಗಳ ಪಾಲಾಗುತ್ತಿದೆ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.
ಶಿಕ್ಷಕಿಯ ನೋವಿನ ನುಡಿ:-
ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಳೆದ ಐದಾರು ವರ್ಷಗಳಿಂದ ಗೋಡೆಯೊಳಗೆ ನೀರಿಳಿಯುತ್ತಿದ್ದು,ಗೋಡೆ ಕುಸಿಯತೊಡಗಿವೆ.ಮಕ್ಕಳ ಆಹಾರವನ್ನು ಇಲಿ,ಹೆಗ್ಗಣಗಳು ತಿಂದು ಹಾಕುತ್ತಿವೆ.ಈಗಾಗಲೇ ಮೂರ್ನಾಲ್ಕು ಬಾರಿ ಹಾವುಗಳು ಬಂದಿವೆ. ಹಾವಿನ ಭಯದಿಂದ ಅಡುಗೆ ಮನೆಯನ್ನು ತೆರೆಯುವುದಕ್ಕೆ ಭಯ ಆಗುತ್ತದೆ.ಆಹಾರ ಪದಾರ್ಥಗಳನ್ನು ಟ್ರಂಕ್ನಲ್ಲಿಟ್ಟು ಮಕ್ಕಳಿಗೆ ಕೊಡುತ್ತೇವೆ.ಕೊಠಡಿಯ ಬೀಗ ತೆಗೆದು,ಕಸ ಗುಡಿಸಿ ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಮಕ್ಕಳನ್ನು ಕೇಂದ್ರದೊಳಗೆ ಕರೆಯುತ್ತೇವೆ ಎನ್ನುತ್ತಾರೆ ಹಾಗೂ ಈ ಅಂಗನವಾಡಿ ಕೇಂದ್ರದ ಸುತ್ತಲೂ ಗದ್ದೆ ಇರುವುದರಿಂದ ಇಲಿ,ಹೆಗ್ಗಣಗಳು ಗೋಡೆಯನ್ನು ಕೊರೆದುಹಾಕಿವೆ.ಮೂರ್ನಾಲ್ಕು ಬಾರಿ ಹಾವು ಪ್ರವೇಶಿಸಿ ಭೀತಿಯುಂಟುಮಾಡಿದೆ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಸವಿತಾ.
ಮೇಲ್ವಿಚಾರಕರ ಭೇಟಿ:-
ಈ ಘಟನೆಯ ಸುದ್ದಿ ತಿಳಿದ ನಂತರ ಗ್ರಾಮದ ಕೇಂದ್ರ 01 ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂಧಿಯವರಾದ ಮೇಲ್ವಿಚಾರಕರು ಶ್ರೀ ಮತಿ ಶಾಂತಮ್ಮ ಅವರ ಭೇಟಿ ನೀಡಿ ಗ್ರಾಮಸ್ಥರು,ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋನಾಳ ಅವರ ಮುಖ್ಯೋಪಾಧ್ಯಾಯರು ಹಾಗೂ ಎಸ್.ಡಿ.ಎಮ್.ಸಿ.ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿರುವ ಒಂದು ಕೊಠಡಿಯಲ್ಲಿ ತರಗತಿ ನಡೆಸಲು ತೀರ್ಮಾನಿಸಲಾಯಿತು ಎಂದು
ಮೇಲ್ವಿಚಾರಕರಾದ ಶಾಂತಮ್ಮ ಅವರು ತಿಳಿಸಿದ್ದಾರೆ.
ಹೋರಾಟಗಾರರ ಅನಿಸಿಕೆ:-
ಈ ಅಂಗನವಾಡಿ ಕೇಂದ್ರವು ಮಕ್ಕಳ ಬದಲಿಗೆ ಹಾವು,ಚೇಳುಗಳ ಕೇಂದ್ರವಾಗಿವೆ.ಇದರಿಂದ ಮಕ್ಕಳು ಅಂಗನವಾಡಿಗೆ ಹೋಗುವುದೇ ಇಲ್ಲ ಎಂದು ಹಠ ಮಾಡುತ್ತಾರೆ.ಶಿಕ್ಷಣಕ್ಕೆ ಸಾಕಷ್ಟು ಒತ್ತು ಕೊಡುತ್ತೇವೆ ಎಂದು ಹೇಳಿಕೊಳ್ಳುವ ಸರಕಾರ ಅಂಗನವಾಡಿಗಳಿಗೆ ಮೂಲಸೌರ್ಕಗಳನ್ನು ಕಲ್ಪಿಸದಿರುವುದು ದುರದೃಷ್ಟಕರ. -ಸಾಯಿಬಾಬು ಡಿಎಸ್ಎಸ್ ಹೋರಾಟಗಾರರು..
ಕ್ರಮ ಯಾವಾಗ ? :-
ಇನ್ನೂ ಮುಂದೆಯಾದರೂ
ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ,ಅನಾಹುತಗಳು ಆಗದ ಹಾಗೇ ಈ ಅಂಗನವಾಡಿಗೆ ಸೂಕ್ತವಾದ ಸ್ಥಳವನ್ನು ಪರಿಶೀಲನೆ ಮಾಡಿ ನೂತನ ಕಟ್ಟಡವನ್ನು ಪ್ರಾರಂಭ ಮಾಡಿ ಕ್ರಮ ಜರುಗಿಸುವರೇ ಕಾದು ನೋಡಬೇಕಾಗಿದೆ.
ವರದಿ : ಎಚ್. ಕೆ. ಬಡಿಗೇರ್