ಅಫಜಲಪುರ:ತಾಲೂಕಿನ ಕರಜಗಿ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿರುವ ಶಿವಪುತ್ರ(30) ಆಸ್ಪತ್ರೆಯ ಮೇಲೆ ಸಿಂಟೆಕ್ಸ್ ನೀರು ತುಂಬಲು ಹೋದಾಗ ವಿದ್ಯುತ್ ತಂತಿ ತಗುಲಿ ಸಾವನಪ್ಪಿರುವ ಘಟನೆ ಕರಜಗಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳಿಗ್ಗೆ ಯಥಾವತ್ತಾಗಿ ತಮ್ಮ ಕೆಲಸಕ್ಕೆ ಆಸ್ಪತ್ರೆಗೆ ಆಗಮಿಸಿದ ಶಿವಪುತ್ರ ಆಸ್ಪತ್ರೆಯ ನಿರ್ವಹಣೆಗೆ ನೀರು ಖಾಲಿಯಾಗಿರುವುದನ್ನು ಕಂಡು ಆಸ್ಪತ್ರೆಯ ಮೇಲಿರುವ ಸಿಂಟೆಕ್ಸಗೆ ನೀರು ತುಂಬಲು ಹೋಗಿದ್ದಾನೆ.ಆಸ್ಪತ್ರೆಯ ಮೇಲ್ಚಾವಣಿಗೆ ಅಂಟಿಕೊಂಡಿರುವ ಮೇನ್ ಲೈನ್ ವಿದ್ಯುತ್ ತಂತಿ ಸ್ಪರ್ಶಕ್ಕೆ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಜರುಗಿದೆ.ಈ ಹಿಂದೆ ಅದೇ ವಿದ್ಯುತ್ ತಂತಿಯ ಸ್ಪರ್ಶಕ್ಕೆ ಒಂದು ಮೇಕೆ ಸಾವನಪ್ಪಿರುವ ಘಟನೆ ಜರುಗಿದೆಯಾದರೂ ಅಲ್ಲಿನ ವೈದ್ಯಾಧಿಕಾರಿಗಳಾದ ಡಾ.ಮಹಮ್ಮದ್ ಇಶಾದ್ ಅಲಿ ಇಲ್ಲಿಯವರೆಗೆ ಅದರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದಕ್ಕೆ ಸ್ಥಳೀಯರು ಆರೋಪಿಸಿದರು. ಆಸ್ಪತ್ರೆಯ ಮೇಲ್ಚಾವಣಿಗೆ ಅಟ್ಟಿಕೊಂಡಿರುವ ವಿದ್ಯುತ್ ತಂತಿಯನ್ನು ಗಮನಿಸಿದರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಧೋರಣೆ ತೋರುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶಿವಪುತ್ರ ಮದುವೆಯಾಗಿ ಒಂದು ವರ್ಷವಾಗಿದ್ದು ವಿದ್ಯುತ್ ತಂತಿಯ ಸ್ಪರ್ಶದ ಅಚಾತುರ್ಯಕ್ಕೆ ಸರಕಾರಿ ನೌಕರ ಸಾವನಪ್ಪಿದು,ಕುಟುಂಬದ ಸದಸ್ಯರಿಗೆ ಸಹಿಸಿಕೊಳ್ಳಲಾಗದ ದುಃಖವಾಗಿದೆ.