ರಾಯಚೂರು ಜುಲೈ 14 .ಕರ್ನಾಟಕ ವೈದ್ಯಕೀಯ ಮಂಡಳಿ ಅಥವಾ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಬೋರ್ಡ್ಗಳಿಂದ ಪ್ರಮಾಣ ಪತ್ರ ಪಡೆಯದೇ ವೈದ್ಯ ವೃತ್ತಿ ಮಾಡುತ್ತಿರುವವರನ್ನು ನಕಲಿ ವೈದ್ಯರೆಂದು ಪರಿಗಣಿಸಬೇಕಾಗುತ್ತದೆ. ಆಯಾ ತಾಲೂಕುಮಟ್ಟದ ಸಮಿತಿಗಳಿಂದ ಪರಿಶೀಲನೆ ವೇಳೆಯಲ್ಲಿ ನಕಲಿ ವೈದ್ಯರು ಎಂದು ಗೊತ್ತಾಗಿ ಅಂತಹ ಯಾರಾದರು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ ಮತ್ತು ಆಸ್ಪತ್ರೆ ನಡೆಸಿದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆಗಳ ನಿವಾರಣೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಕ್ಲಿನಿಕ್ಗಳಿಗೆ ನೋಟೀಸ್ ಜಾರಿ: ಕೆಪಿಎಂಇ ಕಾಯ್ದೆಯಡಿ ಚಿಕಿತ್ಸಾಲಯವನ್ನು ನೋಂದಾಯಿಸದೇ ಇರುವ, ಕೆಪಿಎಂಇ ಕಾಯ್ದೆಯಡಿ ಆಯುರ್ವೇದ ಆಸ್ಪತ್ರೆ ಎಂದು ನೋಂದಾಯಿಸಿ ಅಲೋಪತಿ ನಡೆಸುವ, ಯಾವುದೇ ಅಗ್ನಿಶಾಮಕ ನಿರ್ವಹಣೆ ಇಲ್ಲದ, ಕೆಪಿಎಂಇ ವ್ಯವಸ್ಥೆಯಡಿ ಹೋಮಿಯೋಪತಿ ಎಂದು ನೋಂದಾಯಿಸಿ ಅಲೋಪತಿ ನಡೆಸುವ, ಕೆಪಿಎಂಇ ಕಾಯ್ದೆಯಡಿ ಅಲೋಪತಿ ಎಂದು ನೊಂದಾಯಿಸಿ ಆಯುಷ್ ವೈದ್ಯಕೀಯ ನಡೆಸುವ, ಅನುಮತಿ ಇಲ್ಲದೇ ಎಕ್ಸರೆ ಮಾಡುವ ಬಗ್ಗೆ ಪರಿಶೀಲನೆ ವೇಳೆಯಲ್ಲಿ ಗೊತ್ತಾಗಿದ್ದರಿಂದ ದೇವದುರ್ಗ ತಾಲೂಕಿನ 10 ಖಾಸಗಿ ಕ್ಲಿನಿಕ್ಗಳು, ಸಿರವಾರ ತಾಲೂಕಿನ ಎರಡು ಖಾಸಗಿ ಕ್ಲಿನಿಕ್ಗಳು ಮತ್ತು ಮಾನ್ವಿ ತಾಲೂಕಿನ ಎರಡು ಖಾಸಗಿ ಕ್ಲಿನಿಕ್ಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ ಬಗ್ಗೆ ಜುಲೈ 10ರಂದು ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಿಷಯವು ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ. ಈ ಖಾಸಗಿ ಕ್ಲಿನಿಕ್ಗಳ ಮೇಲೆ ನಿಯಮಾನುಸಾರ ದಂಢವಿದಿಸಿ ಕ್ರಮವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯಿದೆಯು ಈಗಾಗಲೇ ಜಾರಿ ಬಂದಿದೆ. ಈ ಕಾಯಿದೆಯನುಸಾರ ಕಾರ್ಯನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಬೇಕು. ಅಗತ್ಯ ವಿದ್ಯಾರ್ಹತೆ ಇಲ್ಲದೇ ವೈದ್ಯಕೀಯ ವೃತ್ತಿ ಮತ್ತು ನರ್ಸಿಂಗ್ ಹೋಮ್ ನಡೆಸುವುದು ಕೆಪಿಎಂಇ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆರೋಗ್ಯಾಧಿಕಾರಿಗಳು ಈ ಕಾಯ್ದೆಯನ್ನು ಸರಿಯಾಗಿ ಅರಿಯಬೇಕು. ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿ ಎಚ್ಚರಿಕೆ: ವೈದ್ಯಕೀಯ ಪದವಿ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಹಾಗೂ ವೈದ್ಯಕೀಯ ಪದವಿ ಹೊಂದಿರುವ ವೈದ್ಯರು ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಣಿ ಆಗದೇ ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್, ಆಸ್ಪತ್ರೆ, ಲ್ಯಾಬ್, ದಂತ ವೈದ್ಯರುಗಳು ವೃತ್ತಿ ಅಭ್ಯಾಸ ನಡೆಸುತ್ತಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಜೊತೆಗೆ ಕೆಪಿಎಂಇ ಕಾಯ್ದೆಯಡಿ ನೋಂದಾಯಿಸಿದ ಪದ್ಧತಿಯಲ್ಲೇ ವೈದ್ಯಕೀಯ ವೃತ್ತಿ ನಡೆಸುವುದನ್ನು ಬಿಟ್ಟು ಇತರೆ ಯಾವುದೇ ಪದ್ಧತಿಯಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದಲ್ಲಿ ಅಂತವರ ವಿರುದ್ಧ ಕೆಪಿಎಂಇ ಕಾಯ್ದೆಯಡಿ 50 ಸಾವಿರ ರೂ ದಂಢ ಮತ್ತು 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದರ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿ ಎಚ್ಚರಿಕೆ ನೀಡಲಾಗಿದೆ.
ತಾಲೂಕುಮಟ್ಟದ ಸಮಿತಿ ರಚಿಸಿ ಆದೇಶ: ರಾಯಚೂರ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ತಾಲೂಕುಮಟ್ಟದ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ ಹಾಗೂ ಲ್ಯಾಬಗಳು ಮತ್ತು ಆಸ್ಪತ್ರೆಗಳನ್ನು ಕೆಪಿಎಂಇ ಕಾಯ್ದೆಯಡಿ ವಿಧಿಸಲಾದ ಷರತ್ತುಗಳನ್ವಯ ಕಾಲಕಾಲಕ್ಕೆ ತಪಾಸಣೆ ಮಾಡಲು ತಹಸೀಲ್ದಾರ ಅಧ್ಯಕ್ಷತೆಯಲ್ಲಿ ತಾಲೂಕುಮಟ್ಟದ ತಾಲೂಕುಮಟ್ಟದ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ ಹಾಗೂ ಲ್ಯಾಬಗಳು ಮತ್ತು ಆಸ್ಪತ್ರೆಗಳನ್ನು ತಪಾಸಣೆ ಮಾಡಲು ತಾಲೂಕುಮಟ್ಟದ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದೆ. ಈ ಸಮಿತಿಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಮತ್ತು ತಾಲೂಕು ಐಎಂಎ ಅಧ್ಯಕ್ಷರು, ತಾಲೂಕು ಎಎಫ್ಐ ಅಧ್ಯಕ್ಷರು ಹಾಗೂ ತಾಲೂಕು ಪೊಲೀಸ್ ವೃತ್ತ ನಿರೀಕ್ಷಕರು ಸಮಿತಿಯ ಸದಸ್ಯರಾಗಿರುತ್ತಾರೆ. ಈ ತಂಡವು ಪ್ರತಿ ತಿಂಗಳು ಸುಮಾರು 10 ಸಂಸ್ಥೆಗಳಿಗೆ ಭೇಟಿ ನೀಡಿ ಕೆಪಿಎಂಇ ಕಾಯ್ದೆಯನ್ವಯ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಾಗೂ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡುತ್ತಿರುವುದರ ಬಗ್ಗೆ ಪರಿಶೀಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.