ರಾಯಚೂರು ಜುಲೈ 18 ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ರಾಯಚೂರ ಜಿಲ್ಲೆಯು ಉತ್ತಮ ಸ್ಥಾನ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರು ತೆಗೆದುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಹೇಳಿದರು.
ಜುಲೈ 18ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ರಾಯಚೂರ ಜಿಲ್ಲೆಯು ಪ್ರತಿ ಬಾರಿ ಕೆಳಗಿನ ಸ್ಥಾನ ಪಡೆಯುವುದು ಆರೋಗ್ಯಕರ ಬೆಳವಣಿಗೆಯಲ್ಲ. ಕಳಪೆ ಫಲಿತಾಂಶ ಪಡೆಯುವುದು ಕಳಂಕದ ಸಂಗತಿಯಾಗಿದೆ. ಹೀಗಾಗಿ ವಿಶೇಷವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಇದರ ಜವಾಬ್ದಾರಿ ಪಡೆದುಕೊಂಡು ಫಲಿತಾಂಶ ಸುಧಾರಣೆಗಾಗಿ ಸರ್ಕಾರಿ ಶಾಲೆಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ ಸುವ್ಯವಸ್ಥಿತ ಕಾರ್ಯದ ಯೋಜನೆ ರೂಪಿಸಿ ಕಾರ್ಯಶೀಲರಾಗಬೇಕು ಎಂದು ಸಚಿವರು ತಿಳಿಸಿದರು.
ಫಲಿತಾಂಶ ಸುಧಾರಣೆಗೆ ಸಂಬAಧಿಸಿದAತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿ ಹಳ್ಳಿಗೆ ಒಬ್ಬರಂತೆ ಮತ್ತು ತಾಲೂಕುಮಟ್ಟದ ಅಧಿಕಾರಿಗಳನ್ನು ಪ್ರತಿ ಶಾಲೆಗೆ ಒಬ್ಬರಂತೆ ನೊಡಲ್ ಅಧಿಕಾರಿಗಳು ಎಂದು ನೇಮಿಸಿ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಬೇಕು ಎಂದು ಸಚಿವರು ಸಲಹೆ ಮಾಡಿದರು.
ಶಿಕ್ಷಣದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಹತ್ವದ ಹಂತಗಳಾಗಿವೆ. ಬಹಳಷ್ಟು ಮಕ್ಕಳಲ್ಲಿ ಪರೀಕ್ಷಾ ಭಯ ಇರುತ್ತದೆ. ಹಾಗಾಗಿ ಮೇಲಿಂದ ಮೇಲೆ ಕಿರು ಪರೀಕ್ಷೆ ಮತ್ತು ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಒಟ್ಟಾರೆ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆಗಳು ಈಗಿಂದಲೇ ಸನ್ನದ್ದವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ: ಶಾಲಾ ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆಗೆ ನಿಮ್ಮಲ್ಲಿ ಪ್ಲಾನ್ ಇದೆಯಾ? ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವರು, ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆ ಕಾರಣ ಎಂಬುದರಲ್ಲಿ ಹುರುಳಿಲ್ಲ. ನಮ್ಮಲ್ಲಿ ಶಿಕ್ಷಕರ ಕೊರತೆ ಇಲ್ಲ. ಶಾಲಾ ಕಾಲೇಜುಗಳಿಗೆ ನಿಯಮಿತ ಭೇಟಿ ನೀಡಿ, ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ ಮತ್ತು ಕಲಿಕೆಯ ಗುಣಮಟ್ಟ ಪರಿಶೀಲಿಸದೇ ಮಾನಿಟರಿಂಗ್ ಮಾಡುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಿಂದೆ ಬಿದ್ದಿರುವುದೇ ಫಲಿತಾಂಶ ಕುಸಿಯಲು ಕಾರಣವಾಗಿದೆ. ಇದು ಸರಿಯಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಿಇಓ ಅಧ್ಯಕ್ಷತೆಯಲ್ಲಿ ಕಮೀಟಿ ರಚಿಸಿ: ನಮ್ಮ ಜಿಲ್ಲೆಯ ಮಕ್ಕಳು ಪ್ರತಿಭಾನ್ವಿತರಿದ್ದಾರೆ. ಆದರೆ ಕೆಲವು ಶಿಕ್ಷಕರು ಮತ್ತು ಉಪನ್ಯಾಸಕರ ನಿಷ್ಕಾಳಜಿಯಿಂದಾಗಿ ಫಲಿತಾಂಶ ಕುಸಿಯುತ್ತಿದೆ. ಈ ಬಗ್ಗೆ ಸಮಗ್ರ ಚಿಂತನ ಮಂಥನ ನಡೆಸಿ ಕಾರ್ಯಯೋಜನೆ ರೂಪಿಸಲು ಜಿಲ್ಲಾ ಪಂಚಾಯತ್ ಸಿಇಓ ಅವರ ಅಧ್ಯಕ್ಷತೆಯಲ್ಲಿ ಒಂದು ಜಿಲ್ಲಾಮಟ್ಟದ ಕಮಿಟಿಯನ್ನು ರಚಿಸಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರು ಸಲಹೆ ಮಾಡಿದರು.
ಪ್ರತಿ ವರ್ಷ ಹತ್ತು ಸಾವಿರ ಸಸಿ ನೆಡಿಸಿ: ಉತ್ತಮವಾದ ಪರಿಸರ ಸಿಗುವ ನಿಟ್ಟಿನಲ್ಲಿ ರಾಯಚೂರ ಸಿಟಿಯಲ್ಲಿ ಪ್ರತಿ ವರ್ಷ ಹತ್ತು ಸಾವಿರ ಸಸಿ ನೆಟ್ಟು ಪೋಷಣೆ ಮಾಡಬೇಕು. ಎಲ್ಲ ತಾಲೂಕುಗಳಲ್ಲಿ ಸಹ ಗರಿಷ್ಟ ಮಟ್ಟದಲ್ಲಿ ಸಸಿ ನೆಡಲು ಕ್ರಮವಹಿಸಬೇಕು ಎಂದು ಸಚಿವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲೂಕು ಆಸ್ಪತ್ರೆ ಬೇಕು: ರಾಯಚೂರ ಗ್ರಾಮೀಣ ಕ್ಷೇತ್ರದ ಜನರಿಗೆ ಅನುಕೂಲವಾಗುವ ಹಾಗೆ ತಾಲೂಕು ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವಣೆ ಕಳುಹಿಸುವಂತೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಶಾಲೆಗಳಿಗೆ ಶೌಚಾಲಯವಿಲ್ಲ: ಸಿಂಧನೂರಿನ ಬಹುತೇಕ ಶಾಲೆಗಳಿಗೆ ಶೌಚಾಲಯಗಳಿಲ್ಲ. ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ತುಕ್ಕು ಹಿಡಿಯುತ್ತಿದ್ದು, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಸುವವರು ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರು ಹೇಳಿದರು.
ಲಿಂಗಸೂರಿಗೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಕೊಡಿ
ಲಿಂಗಸೂರ ತಾಲೂಕಿನ ಜನತೆಗೆ ಅನ್ಯಾಯವಾಗದ ಹಾಗೆ 50 ಬೆಡ್ ನ ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ಲಿಂಗಸೂರಗೆ ಕೊಡಲು ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ ಅವರು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರುವಿಹಾಳ, ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ ನಾಯಕ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಗಜಾನನ ಬಾಳೆ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಶಫಿವುಲ್ಲಾಖಾನ್ ಮೆಹಬೂಬ, ತಿಮ್ಮಪ್ಪ ಮಲ್ಲಯ್ಯ, ರುದ್ರಾಗೌಡ ಮಹಾಂತಗೌಡ, ಸೋಮಶೇಖರ ಪಾಟೀಲ, ಮೀನಾಕ್ಷಿ ರಾಮಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣಬಸವರಾಜ, ಸಿಪಿಓ ಡಾ.ಟಿ.ರೋಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.