ರಾಯಚೂರು ಫೆಬ್ರವರಿ.15. ಸಿಂಧನೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಿಂಧನೂರು ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಸಿಂಧನೂರು ತಾಲೂಕ ಇಂದಿರಾಗಾಂಧಿ ಶ್ರೀ ಶಕ್ತಿ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಬೇಟಿ ಬಚಾವ್ ಬೇಟಿ ಪಡಾವೋ ಯೋಜನೆ ಅಡಿ ಮುಂಚೂಣಿ ಕಾರ್ಯಕರ್ತರಿಗೆ ಅಂದರೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಎ.ಎನ್.ಎಂ ರವರಿಗೆ ಹೆಣ್ಣು ಮಗುವಿನ ರಕ್ಷಣೆ , ಹೆಣ್ಣು ಮಗುವನ್ನು ಕಾಪಾಡುವ ಮತ್ತು ಶಿಕ್ಷಣವನ್ನು ಕೊಡುವ ಕುರಿತಾಗಿ ಅವರು ಕೆಲಸ ನಿರ್ವಹಿಸುವ ಕ್ಷೇತ್ರಗಳಲ್ಲಿ ಯಾವ ರೀತಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಬಲವರ್ದನೆ (Capacity building) ಕಾರ್ಯಗಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ನಿರ್ವಹಿಸಿದ ಇಂದಿರಾಗಾಂಧಿ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಶ್ರೀನಿವಾಸ್ ಇವರು ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮುಖಾಂತರ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು, ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸರಿಯಾಗಿ ಒದಗಿಸಬೇಕೆಂದು, ಸರಿಯಾದ ತಿಳುವಳಿಕೆ ನೀಡುವುದು ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ತಾಲೂಕ ಆರೋಗ್ಯ ಅಧಿಕಾರಿಗಳಾದ ಶ್ರೀ ಅಯ್ಯನಗೌಡ ಇವರು ಮಾತನಾಡಿ ಹೆಣ್ಣು ಮಕ್ಕಳ ಬಗ್ಗೆ ಕುಟುಂಬಗಳಲ್ಲಿ ಕೀಳರಿಮೆಯನ್ನು ತೋರದೆ ಪುರುಷರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಬೇಕು ಹಾಗೂ ಬಾಲ್ಯ ವಿವಾಹ ಮಕ್ಕಳ ಕಳ್ಳ ಸಾಗಾಣಿಕೆ ಹೆಣ್ಣು ಬ್ರೂಣ ಹತ್ಯೆ , PC &.PNDT ACT ಕುರಿತಾಗಿ ಸವಿವರವಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗೀತಾ ಹಿರೇಮಠ್ ಇವರು ಮಾತನಾಡಿ ಸಮಾಜದಲ್ಲಿ ಲಿಂಗ ತಾರತಮ್ಯ ಲಿಂಗ ಸಮಾನತೆ ಹಾಗೂ ಹೆಣ್ಣು ಮಗುವಿಗೆ ಆಗುವಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಮುಂಚೂಣಿ ಕಾರ್ಯಕರ್ತೆಯರ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಿಂಗನಗೌಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧನೂರು ಇವರು ಮಾತನಾಡಿ ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಉದ್ದೇಶಗಳು ಗುರಿಗಳ ಬಗ್ಗೆ ಮಾತನಾಡಿ ಹೆಣ್ಣು ಮಗುವಿನ ರಕ್ಷಣೆ ಹಾಗೂ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದ್ದು ಅದರಲ್ಲಿ ಎಲ್ಲಾ ಇಲಾಖೆಗಳು ಸೂಕ್ತ ಜವಾಬ್ದಾರಿಗಳನ್ನು ತೆಗೆದುಕೊಂಡು ಕರ್ತವ್ಯಗಳನ್ನು ನಿರ್ವಹಿಸಿದಾಗ ಮಾತ್ರ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಮೇಲ್ವಿಚಾರಕೀಯರಾದ ಶ್ರೀಮತಿ ವಿದ್ಯಾವತಿ ಶ್ರೀದೇವಿ ಸವಿತಾ ವಿಜಯಲಕ್ಷ್ಮಿ ಜಯಲಲಿತಾ ಶೃತಿ ಪಾಟೀಲ್ ಹಾಗೂ ಮಹಾಂತಮ್ಮ ಇದ್ದರು ಪೋಷಣ ಅಭಿಯಾನ ಸಂಯೋಜಕರಾದ ಶ್ರೀ ಮುತ್ತಣ್ಣ ಸ್ವಾಗತಿಸಿದರು ಮೇಲ್ವಿಚಾರಕಿಯರಾದ ಶ್ರೀಮತಿ ಸವಿತಾ ಸಜ್ಜನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.