ರಾಯಚೂರು,ಅ.೧೭(ಕ.ವಾ):- ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಹಾಗೂ ಚಿಕನ್ ಗುನ್ಯಾದಂತಹ ರೋಗವಾಹಕ ಆಶ್ರೀತ ರೋಗಗಳು ಹೆಚ್ಚಾಗದಂತೆ, ಜಿಲ್ಲೆಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ, ಆರೋಗ್ಯ ಸೇವೆಗಳಂತಹ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಜನರಿಗೆ ಈ ರೋಗಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಅ.೧೭ರ(ಮಂಗಳವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲೇರಿಯಾ ಜ್ವರ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ ೧೫ ದಿನಗಳ ಒಳಗಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಜ್ವರ, ಚಳಿ ಜ್ವರ, ತಲೆನೋವು, ಮೈಕೈ ನೋವು ನಡುಕ ಹಾಗೂ ವಾಂತಿ ಸೇರಿದಂತೆ ಹಲವು ಲಕ್ಷಣಗಳನ್ನು ಇವು ಹೊಂದಿರುತ್ತವೆ ಆದ್ದರಿಂದ ಜನರಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
೨೦೨೦ರಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು ೧೦ ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, ೨೦೨೧ರಲ್ಲಿ ೧೨ ಹಾಗೂ ೨೦೨೨ರಲ್ಲಿ ೧೦ ಹಾಗೂ ೨೦೨೩ರ ಸೆಪ್ಟಂಬರ್ ತಿಂಗಳ ವರೆಗೆ ಕೇವಲ ೨ ಪ್ರಕರಣಗಳು ಕಂಡುಬಂದಿದ್ದು, ಮಲೇರಿಯಾ ಪ್ರಕರಣಗಳು ಹೆಚ್ಚಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಡೆಂಗ್ಯೂ ರೋಗಕ್ಕೆ ಸಂಬAಧಪಟ್ಟಂತೆ ಜಿಲ್ಲೆಯಲ್ಲಿ ೨೦೨೦ರಲ್ಲಿ ಒಟ್ಟು ೫೭೦ ಶಂಕಿತರಲ್ಲಿ ಒಟ್ಟು ೨೯ ಡೆಂಗ್ಯೂ ಜ್ವರ ಕಂಡುಬAದಿದ್ದು, ೨೦೨೧ರಲ್ಲಿ ೩೧೭೫ ಶಂಕಿತರಲ್ಲಿ ೧೨೨ ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ೨೦೨೨ರಲ್ಲಿ ೨೪೩೦ ಶಂಕಿತರ ಪೈಕಿ ೮೩ ಜನರಲ್ಲಿ ಡೆಂಗ್ಯೂ ಕಂಡುಬಂದಿದ್ದು, ೨೦೨೩ರ ಸೆಪ್ಟಂಬರ್ ತಿಂಗಳ ವರೆಗೆ ೧೭೫೦ ಶಂಕಿತರನ್ನು ತಪಾಸಣೆ ಮಾಡಿದ್ದು, ೪೧ ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಆನರಿಗೆ ಡೆಂಗ್ಯೂ ಸೊಳ್ಳೆ ಕಚ್ಚದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ತಿಳಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಮತ್ತು ನೀರಿನ ತೊಟ್ಟಿಗಳನ್ನು ಯಾವಾಗಲೂ ಮುಚ್ಚಿಡುವಂತೆ ಜನರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ವೈದ್ಯಾಧಿಕಾರಿ ಡಾ.ಚಂದ್ರಶೇಖರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪೂರ, ಜಿಲ್ಲಾ ಶಸ್ತ ಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಶೋಧಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.