ರಾಯಚೂರು,ಏ.18(ಕವಾ):- ಮಹತ್ವಾಕಾಂಕ್ಷೆ ಜಿಲ್ಲೆಯಾದ ರಾಯಚೂರು ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಜಿಲ್ಲೆಯಲ್ಲಿ ಸಿಎಸ್ಆರ್ ಅನುದಾನದಡಿಯಲ್ಲಿ ಹೆಚ್ಚುವರಿ ಪೌಷ್ಠಿಕಾಂಶದ ಪೂರೈಕೆಯ ನೆರವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಏ.18ರ(ಮಂಗಳವಾರ) ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಜಲನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕೇಂದ್ರೀಯ ಉಗ್ರಾಣ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಸಿಎಸ್ಆರ್ ಉಪಕ್ರಮಗಳಡಿಯಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ರಾಯಚೂರಿನ ಅಪೌಷ್ಠಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶದ ಪೂರೈಕೆಯ ನೆರವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಹೆಚ್ಚುವರಿ ಪೌಷ್ಠಿಕಾಂಶದ ಪೂರೈಕೆ ಕಾರ್ಯಕ್ರಮಕ್ಕೆ 3.78 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಕಾರ್ಯಕ್ರಮಗಳಿಗೆ ಹಲವು ಕಂಪನಿಗಳಿಂದ ಜಿಲ್ಲೆಗೆ ಇಲ್ಲಿಯವರೆಗೂ ಬಿಡುಗಡೆಯಾದ ಅನುದಾನಕ್ಕೆ ಹೋಲಿಸಿದರೆ ಈ ಮೊತ್ತವು ಅತ್ಯಂತ ಹೆಚ್ಚಿನ ಅನುದಾನವಾಗಿದೆ ಎಂದರು.
ಹೆಚ್ಚುವರಿ ಪೌಷ್ಠಿಕಾಂಶ ಪೂರೈಕೆ ಕಾರ್ಯಕ್ರಮಕ್ಕಾಗಿ ಒಂದು ವರ್ಷ ಮುಂಚಿತವಾಗಿ ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶ ಪೂರೈಸಲಾಗಿತ್ತು ಮತ್ತು ಈ ಪೌಷ್ಠಿಕಾಂಶ ಪೂರೈಕೆಯಿಂದ ಮಕ್ಕಳಲ್ಲಿ ಆಗುವ ಪರಿಣಾಮಗಳನು ಆಧಾರಿಸಿ ಇಂದು ಹೆಚ್ಚುವರಿ ಪೌಷ್ಠಿಕಾಂಶದ ಪೂರೈಕೆ ನಿಎರವಿಗೆ ಸಿಎಸ್ಆರ್ ಅನುದಾನದಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕೇಂದ್ರೀಯ ಉಗ್ರಾಣ ನಿಗಮವು ಈ ಕಾರ್ಯಕ್ರಮವನ್ನು ಉತ್ತಮ ಕಾರ್ಯಕ್ರಮವೆಂದು ಗಣನೆಗೆ ತೆಗೆದುಕೊಂಡು ಒಂದು ವರ್ಷಗಳ ಕಾಲ ಕಾರ್ಯಕ್ರಮಕ್ಕೆ ಸಹಕರಿಸಿದೆ. ಮತ್ತು ಕಾರ್ಯಕ್ರಮದಡಿ ಪೌಷ್ಠಿಕಾಂಶ ಪೂರೈಕೆಯಿಂದ ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ನಿರಂತರವಾಗಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗಮನಿಸಲಾಗುತ್ತಿತ್ತು ಇದೀಗ ಹೆಚ್ಚುವರಿ ಪೌಷ್ಠಿಕಾಂಶ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 0-6 ವರ್ಷದೊಳಗಿನ ಮಕ್ಕಳಲ್ಲಿ ಸಾಧಾರಣಾ ಅಪೌಷ್ಠಿಕತೆ ಮತ್ತು ತೀವ್ರ ಅಪೌಷ್ಠಿಕತೆ ಕಂಡುಬಂದಿದ್ದು, ಸರ್ಕಾರದಿಂದ ಪೌಷ್ಠಿಕ ಆಹಾರ ದೊರೆಯುತ್ತಿತ್ತ ಆದರೆ ಸುಮಾರು 300 ಮಕ್ಕಳಲ್ಲಿ ಹೆಚ್ಚಿನ ಅಪೌಷ್ಠಿಕ ಕಂಡುಬಂದಿದ್ದರಿಂದ ಹೆಚ್ಚುವರಿ ಪೌಷ್ಠಿಕಾಂಶವನ್ನು ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ವಿಷ್ಣುವರ್ದನ್ ಮಾತನಾಡಿ, ಕೇಂದ್ರೀಯ ಉಗ್ರಾಣ ನಿಗಮವು ಕೇಂದ್ರ ಗ್ರಾಹಕರ ವ್ಯವಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉದ್ಯಮವಾಗಿದ್ದು, ದೇಶದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ವೈಜ್ಞಾನಿಕ ಮತ್ತು ಉತ್ತಮವಾದ ಉಗ್ರಾಣವನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತದೆ.
ಮುಖ್ಯವಾಗಿ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುತ್ತಿದ್ದು, ಅಕ್ಕಾಗಿ ಮಕ್ಕಳಲ್ಲಿ ಪೌಷ್ಠಿಕಾಂಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚುವರಿಯಾಗಿ ನುಗ್ಗೆ ಸೊಪ್ಪಿನ ಪೌಡರ್ ಅನ್ನು ಪೌಷ್ಠಿಕಾಂಶದ ರೀತಿಯಲ್ಲಿ ನೀಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಅನುದಾನದ ಲಭ್ಯತೆ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿರುವ ಕೊರತೆಗಳನ್ನು ನೀಗಿಸಲು ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಯಲ್ಲಿ ಮುಕ್ಯವಾಗಿ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಪ್ರಥಮ ಹಂತದಲ್ಲಿ ಜಿಲ್ಲೆಯ 116 ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶದ ಪೂರೈಕೆಯನ್ನು ಮಾಡಲಾಯಿತು. ಇದರಲ್ಲಿ 100 ಮಕ್ಕಳಲ್ಲಿ ಅಪೌಷ್ಠಿಕತೆಯಲ್ಲಿ ಸುಧಾರಣೆಯಾಗಿದೆ. ಆದ್ದರಿಂದ ಈ ಹೆಚ್ಚುವರಿ ಪೌಷ್ಠಿಕಾಂಶ ಪೂರೈಕೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರೀಯ ಉಗ್ರಾಣ ನಿಗಮದಿಂದ ಮಹತ್ವಾಕಾಂಕ್ಷೆ ಜಿಲ್ಲೆಯ ಜಿಲ್ಲಾಶಿಕಾರಿಗಳಿಗೆ ಜಿಲ್ಲೆಯಲ್ಲಿರುವ ಅಪೌಷ್ಠಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶ ಪೂರೈಕೆಗಾಗಿ 3 ಕೋಟಿ 78 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ.ಪಂಡಾ, ಪ್ರಧಾನ ವ್ಯವಸ್ಥಾಪಕಿ ಸುನಾಲಿ ಗವಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಮ್ಮ, ಜಿಲ್ಲಾ ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮಾಧಿಕಾರಿ ಯೂಸೂಫ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.