ರಾಯಚೂರು,ಜೂ.೨೨ ಮುನಿರಾಬಾದ್- ಮಹೆಬೂಬನಗರ ರೈಲು ಮಾರ್ಗ ಯೋಜನೆಯು ಅತ್ಯಂತ ಹಳೆಯದಾಗಿದ್ದುದರಿಂದ ಹಲವು ಬಾರಿ ಕೊಪ್ಪಳ ಸಂಸದರೊಂದಿಗೆ ಖುದ್ದಾಗಿ ಕೇಂದ್ರ ರೈಲ್ವೆ ಸಚಿವರಿಗೆ ಭೇಟಿ ನೀಡಿ ಸದರಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ವಿನಂತಿಸಿದ್ದು ಮತ್ತು ಇದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದರಿಂದ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದೆ, ಇದರ ಪರಿಣಾಮವಾಗಿ ಸಿಂಧನೂರುವರೆಗೆ ಭೂಸ್ವಾಧೀನ, ರೈಲ್ವೆ ಕಾಮಗಾರಿ ಪೂರ್ಣಗೊಂಡು, ರೈಲ್ವೆ ನಿಲ್ದಾಣವು ಉದ್ಘಾಟನೆಗೆ ಸಿದ್ದಗೊಂಡಿದೆ ಎಂದು ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿಂಧನೂರು ತಾಲ್ಲೂಕಿನ ಸುಲ್ತಾನಪುರದಿಂದ ಮಾನ್ವಿ ತಾಲ್ಲೂಕಿನ ಕಲ್ಲೂರುವರೆಗೆ ಭೂಸ್ವಾಧೀನ ಪ್ರ್ರಕ್ರಿಯೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾನ್ವಿ ತಾಲ್ಲೂಕಿನಲ್ಲಿ ಈಗಾಗಲೇ ೪೭೩.೧೫ ಗುಂಟೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದರಲ್ಲಿ ಮಾನ್ವಿ ತಾಲ್ಲೂಕಿನಲ್ಲಿ ೮೮.೧೪ ಎಕರೆ ಐತೀರ್ಪು ಅನುಮೋದನೆಯಾಗಿದ್ದು, ೩೨.೨೪ ಎಕರೆ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಿದೆ.
ಉಳಿದ ೩೫೨.೧೭ ಎಕರೆ ಅಂತಿಮ ಐತೀರ್ಪು ರಚನೆಗೆ ಸಿದ್ದವಾಗಿದ್ದು ಹಾಗೂ ಈ ಸ್ವಾಧೀನಪಡಿಸಿಕೊಂಡ ಜಮೀನುಗಳ ಭೂಪರಿಹಾರ ಬೇಡಿಕೆಗೆ ಇಲಾಖೆಯಿಂದ ಈಗಾಗಲೇ ರೂ.೨೦೪,೫೪,೪೦,೮೮೮ /- (ಎರಡು ನೂರಾ ನಾಲ್ಕು ಕೋಟಿ ಐವತ್ತು ನಾಲ್ಕು ಲಕ್ಷ, ನಲವತ್ತು ಸಾವಿರದ ಎಂಟು ನೂರಾ ಎಂಬತ್ತೆಂಟು ರೂಪಾಯಿಗಳು) ಬಿಡುಗಡೆಯಾಗಿ ಹಣ ಸಿದ್ದವಿರುತ್ತದೆ. ಈ ಎಲ್ಲಾ ಪ್ರಕ್ರಿಯೆಯು ಸುಮಾರು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಭಾಗದ ರೈಲ್ವೆ ಕಾಮಗಾರಿಗಾಗಿ ರೈಲ್ವೆ ಇಲಾಖೆಯಿಂದ ಈಗಾಗಲೇ ಹಿರೇಕೊಟ್ನೆಕಲ್ ವರೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.