ರಾಯಚೂರು, ಜುಲೈ 4: 2030ರೊಳಗೆ ಹೆಚ್‌ಐವಿ ಮುಕ್ತ ಭಾರತ ಎಂಬ ರಾಷ್ಟ್ರೀಯ ಗುರಿ ಸಾಧಿಸಲು ಆರೋಗ್ಯ ಇಲಾಖೆ ಮಾತ್ರವಲ್ಲದೆ ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (KSAPS)ಯ ಮೂಲಸೌಕರ್ಯ ವಿಭಾಗದ ಜಂಟಿ ನಿರ್ದೇಶಕಿ ಡಾ. ಗಿರಿಜಾ ತಾಯಿ ಹೇಳಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ನಿರ್ದೇಶನದಂತೆ ರಾಯಚೂರು ಜಿಲ್ಲೆಯಲ್ಲಿನ ಹೆಚ್‌ಐವಿ ನಿಯಂತ್ರಣ ಕಾರ್ಯಕ್ರಮಗಳ ಪರಿಶೀಲನೆಗಾಗಿ ರಾಜ್ಯ ಮಟ್ಟದ ತಂಡದೊಂದಿಗೆ ಆಗಮಿಸಿದ್ದ ಅವರು, ವಿವಿಧ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ವಿವಿಧ ಆರೋಗ್ಯ ಕೇಂದ್ರಗಳ ಪರಿಶೀಲನೆ
ಡಾ. ಗಿರಿಜಾ ತಾಯಿ ಅವರು ರೀಮ್ಸ್ ಬೋಧಕ ಆಸ್ಪತ್ರೆ, ಗುಂಜಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಔಷಧಿ ಉಗ್ರಾಣ, ಹೆಚ್‌ಐವಿ ಅಪಾಯದ ಅಂಚಿನಲ್ಲಿರುವ ಜನರಿಗೆ ಜಾಗೃತಿ ಮೂಡಿಸುತ್ತಿರುವ ಹೊಸಬೆಳಕು ಸಂಸ್ಥೆ, ಎಆರ್‌ಟಿ (ART), ಡಿಎಸ್‌ಆರ್‌ಸಿ (DSRC) ಹಾಗೂ ಐಸಿಟಿಸಿ (ICTC) ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು.
ಹೆಚ್‌ಐವಿ ಕುರಿತು ಸಮಗ್ರ ಜಾಗೃತಿ ಅಗತ್ಯ
ಈ ವೇಳೆ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಪರಿಶೀಲನಾ ತಂಡ ಭೇಟಿ ನೀಡುತ್ತಿದ್ದು, ಹೆಚ್‌ಐವಿ ಹರಡುವ ನಾಲ್ಕು ಪ್ರಮುಖ ಮಾರ್ಗಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ವಿಶೇಷವಾಗಿ ಹದಿಹರೆಯದವರ ಆರೋಗ್ಯ ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್‌ಐವಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಮುಂಚೂಣಿ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
95-95-95 ಗುರಿ ಸಾಧನೆಗೆ ಒತ್ತು
ಭಾರತ ಸರ್ಕಾರದ ಮಾರ್ಗಸೂಚಿಯಂತೆ ಮೊಬಿಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನ ಹಾಗೂ 95-95-95 ರಾಷ್ಟ್ರೀಯ ಗುರಿ ಸಾಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
ಅಪಾಯದ ಪ್ರದೇಶಗಳು, ಕಾಲೇಜುಗಳು ಹಾಗೂ ಯುವ ಸಮೂಹಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳ ಮೂಲಕ ಹೆಚ್‌ಐವಿ ಕುರಿತು ಜಾಗೃತಿ ಮೂಡಿಸುವುದು, ಜೊತೆಗೆ ಕ್ಯೂಆರ್ ಕೋಡ್ ಆಧಾರಿತ ಸ್ವಯಂ ಮೌಲ್ಯಮಾಪನ ವ್ಯವಸ್ಥೆ ಕುರಿತು ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೇವಾ ಕೇಂದ್ರಗಳ ಕಾರ್ಯಕ್ಷಮತೆ ಹೆಚ್ಚಿಸಲು ಸೂಚನೆ
ಕೆಎಸ್‌ಎಪಿಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸೇವಾ ಕೇಂದ್ರಗಳಲ್ಲಿ ಸಿಬ್ಬಂದಿಗೆ ಅಗತ್ಯ ತರಬೇತಿ, ಗುಣಮಟ್ಟದ ಪರೀಕ್ಷೆ, ಸಮರ್ಪಕ ಚಿಕಿತ್ಸೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿದರು.
ಅಧಿಕಾರಿಗಳ ಉಪಸ್ಥಿತಿ
ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಹಣಕಾಸು ಜಂಟಿ ನಿರ್ದೇಶಕಿ ಲಲಿತಾ, ಮೂಲಸೌಕರ್ಯ ಉಪ ನಿರ್ದೇಶಕ ಡಾ. ಹನುಮಂತರಾಯಪ್ಪ, ಸಹಾಯಕ ನಿರ್ದೇಶಕಿ (ಟಿಐ) ಜ್ಯೋತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಮಹಮ್ಮದ್ ಶಾಕೀರ್, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಮಲ್ಲಯ್ಯ ಮಠಪತಿ ಸೇರಿದಂತೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.













