ಸಿಂಧನೂರು | ಏಪ್ರಿಲ್ 7
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ಸಮೀಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಸೇವಾ ಸಂಘ (ರಿ) ಬೆಂಗಳೂರು ಹಾಗೂ ತಾಲೂಕು ಘಟಕ ಹಡಪದ ಸಮಾಜ ಸಿಂಧನೂರು ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳು ಮತ್ತು ತಹಸಿಲ್ದಾರ್ ಮುಖಾಂತರ ಸಲ್ಲಿಸಿರುವ ಮನವಿಯಲ್ಲಿ, 12ನೇ ಶತಮಾನದ ಬಸವಾದಿ ಶರಣರ ಪಾವನ ಸ್ಥಳವಾದ ಅನುಭವ ಮಂಟಪದ ಸುತ್ತಮುತ್ತ ಅನೇಕ ಶರಣರ ಅರಿವಿನ ಗವಿಗಳು ಇವೆ ಎಂದು ಉಲ್ಲೇಖಿಸಲಾಗಿದೆ. ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರಿಗೂ ಇದೇ ಪ್ರದೇಶದಲ್ಲಿ ವಿಶೇಷ ಸ್ಥಾನಮಾನವಿದ್ದು, ಅವರ ಅರಿವಿನ ಗವಿ ಅಲ್ಲಿ ಅಸ್ತಿತ್ವದಲ್ಲಿದೆ ಎಂದು ತಿಳಿಸಲಾಗಿದೆ.
ಆದರೆ, ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಬೇರೆ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗಂಭೀರ ಆಕ್ಷೇಪಾರ್ಹ ವಿಷಯವಾಗಿದೆ. ಈ ಕ್ರಮದಿಂದ ಹಡಪದ ಸಮುದಾಯದ ಭಕ್ತಿಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ಇತಿಹಾಸದ ಮೌಲ್ಯ ಹೀನಾಯವಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಹಡಪದ ಅಪ್ಪಣ್ಣನವರ ವಂಶಸ್ಥರು ಹಾಗೂ ಸಮಾಜದ ಭಕ್ತರು ಈ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿಭಟನೆಗಳನ್ನು ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದ್ದಾರೆ. ಅನೇಕ ಮಠಾಧೀಶರು ಹಾಗೂ ಸಮಾಜದ ಮುಖಂಡರು ಸಹ ಹೋರಾಟ ನಡೆಸಿದರೂ ನ್ಯಾಯ ದೊರಕಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಅಕ್ರಮ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಸ್ಥಳವನ್ನು ಯಥಾಸ್ಥಿತಿಗೆ ತರಬೇಕು. ಜೊತೆಗೆ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಅದೇ ಅರಿವಿನ ಗವಿಯಲ್ಲಿ ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಸಂಘದ ತಾಲೂಕು ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ಉಪಾಧ್ಯಕ್ಷರಾದ ಸಿದ್ದು ಮಾಡಸಿರವಾರ, ರಾಜಶೇಖರ ಸುಲ್ತಾನಪೂರ, ಪ್ರಚಾರ ಕಾರ್ಯದರ್ಶಿ ವೀರೇಶ ಬಳಗಾನೂರು, ಸಹ ಕಾರ್ಯದರ್ಶಿ ರಾಘು ಅಲ್ಲೂರ ಹಾಗೂ ಇತರ ಮುಖಂಡರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.










