ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಯಲದೊಡ್ಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸುಮಾರು 800 ಕುಟುಂಬಗಳ 2,500ಕ್ಕೂ ಹೆಚ್ಚು ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದ್ದಾರೆ.
ಯದ್ದಯಲದೊಡ್ಡಿ ಗ್ರಾಮದಲ್ಲಿ ವಳಬಳ್ಳಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಈ ಸಮಸ್ಯೆ ಪ್ರತಿವರ್ಷ ಮರುಕಳಿಸುತ್ತಿದೆ. ಆದರೆ ಈ ಬಾರಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ಕೆರೆಯಲ್ಲಿ ಹಾವು ಬಿದ್ದಿರುವ ಕಾರಣ ಆ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿ, ನೀರು ಬಳಸಬಾರದೆಂದು ಸೂಚಿಸಿದ್ದಾರೆ. ಇದರಿಂದ ಗ್ರಾಮಸ್ಥರು ಸುಮಾರು ಒಂದು ಕಿಲೋಮೀಟರ್ ದೂರದಿಂದ ಕುಡಿಯುವ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸರ್ಕಾರಿ ಶಾಲೆಗಳಿಗೂ ನೀರಿನ ಕೊರತೆ ಕಾಡುತ್ತಿದೆ.


"ಖಾಸಗಿ ನೀರು ತೆಗೆದುಕೊಳ್ಳಿ" ಎಂಬ ಅಧಿಕಾರಿಗಳ ಸಲಹೆ
ಗ್ರಾಮಸ್ಥರ ಪ್ರಕಾರ, ಈ ಹಿಂದೆಯೂ ನೀರಿನ ಸಮಸ್ಯೆ ಎದುರಾದ ಸಂದರ್ಭಗಳಲ್ಲಿ ಪಂಚಾಯಿತಿ ವತಿಯಿಂದ ಖಾಸಗಿ ಕೆರೆಯನ್ನು ಗುತ್ತಿಗೆ ಪಡೆದು ಸಾರ್ವಜನಿಕರಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ವ್ಯವಸ್ಥೆ ಮಾಡದೆ, "ಗ್ರಾಮದಲ್ಲಿರುವ ಖಾಸಗಿ ಶುದ್ಧೀಕರಣ ಘಟಕದ ನೀರನ್ನು ಬಳಸಿ" ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರ ಗಮನಕ್ಕೆ ಸಮಸ್ಯೆ ತಂದಾಗ, "ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ" ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಸೂಡಿ, "ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಇನ್ನೂ ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಖಾಸಗಿ ಶುದ್ಧೀಕರಣ ಘಟಕದಿಂದ ನೀರು ಪಡೆದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳಿಗೂ ಗ್ರಾಮಸ್ಥರ ಅಸಮಾಧಾನ
ಗ್ರಾಮಸ್ಥರ ಆರೋಪದಂತೆ, ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಅವರು ಅಧಿಕಾರಿಗಳಿಗೆ ಕರೆ ಮಾಡಿದರೂ ಕೆಲವೊಮ್ಮೆ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಕೆಲವರು "ಸಮಸ್ಯೆ ಬಗೆಹರಿಸುತ್ತೇವೆ" ಎಂದು ಭರವಸೆ ನೀಡಿದರೂ, ಇದುವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ
ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಾತ್ಕಾಲಿಕ ಕ್ರಮವಲ್ಲ, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಎರಡು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕು. ಭವಿಷ್ಯದಲ್ಲಿ ನೀರಿನ ಅಭಾವ ಉಂಟಾಗದಂತೆ ಮತ್ತೊಂದು ಕೆರೆಯನ್ನು ನಿರ್ಮಿಸಬೇಕು. ತಕ್ಷಣವೇ ಟ್ಯಾಂಕರ್ ಅಥವಾ ಪರ್ಯಾಯ ವ್ಯವಸ್ಥೆ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.

ಬಡವರ ಬಾರಕೋಲು ಕಳಕಳಿ
ಯದ್ದಯಲದೊಡ್ಡಿ ಗ್ರಾಮಸ್ಥರು ಕಳೆದ ವರ್ಷವೂ ಇದೇ ಸಮಸ್ಯೆಯನ್ನು ನಮ್ಮ "ಬಡವರ ಬಾರಕೋಲು" ಮಾಧ್ಯಮದ ಗಮನಕ್ಕೆ ತಂದಿದ್ದರು. ನಮ್ಮ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಿದ್ದರು. ಆದರೆ ಈ ವರ್ಷವೂ ಅದೇ ಸಮಸ್ಯೆ ಮರುಕಳಿಸಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಮಟ್ಟದ ಸಭೆಗಳಲ್ಲಿ "ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ" ಎಂಬ ಭರವಸೆಗಳು ಕೇವಲ ಸಭೆಗಳಲ್ಲೇ ಸೀಮಿತವಾಗಬಾರದು. ಅದರ ಫಲ ಗ್ರಾಮಗಳಲ್ಲೂ ಕಾಣಬೇಕು.
ಹಿಂದುಳಿದ ಹಳ್ಳಿಗಳೆಂದು ನಿರ್ಲಕ್ಷ್ಯ ಮಾಡದೆ, ಯದ್ದಯಲದೊಡ್ಡಿ ಸೇರಿದಂತೆ ಈ ಭಾಗದ ಗ್ರಾಮಗಳಿಗೆ ಕೂಡಲೇ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಮುಂದಿನ ವರ್ಷ ಇದೇ ಸಮಸ್ಯೆ ಮರುಕಳಿಸದಂತೆ ಶಾಶ್ವತ ಯೋಜನೆ ರೂಪಿಸುವುದು ಅತ್ಯಗತ್ಯ.
– ಬಡವರ ಬಾರಕೋಲು, ಸಾರ್ವಜನಿಕರ ಪರವಾಗಿ













