
📍 ಯಾದಗಿರಿ, ಮೇ 6:
ಎಂಟು ವರ್ಷಗಳ ಕಾಲ ಮುಂದುವರೆದಿದ್ದ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಇದೀಗ ಇದು ವಿವಾದಕ್ಕೆ ಕಾರಣವಾಗಿದೆ.

ಇಂಟಲಿಜೆನ್ಸ್ ವಿಭಾಗದಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಲೇಡಿ ಪೇದೆ ನಡುವೆ ಇದ್ದ ಪ್ರೇಮ ಸಂಬಂಧ ಇದೀಗ ಗಂಭೀರ ತಿರುವು ಪಡೆದಿದೆ.
ಮಾಹಿತಿಯ ಪ್ರಕಾರ, ಇಬ್ಬರೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೋಚಿಂಗ್ ಸೆಂಟರ್‌ನಲ್ಲಿ ಪರಿಚಯವಾಗಿದ್ದು, ಆ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗಿದೆ. ಕಳೆದ ಎಂಟು ವರ್ಷಗಳಿಂದ ಆತ್ಮೀಯ ಸಂಬಂಧದಲ್ಲಿದ್ದ ಇಬ್ಬರೂ ಹಲವು ವರ್ಷ ಒಂದೇ ಸ್ಥಳದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.


ಇನ್ನೂ ಮುಂದೆ, ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆ ಪ್ರತಿಜ್ಞೆ ಮಾಡಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಆದರೆ, ಇತ್ತೀಚೆಗೆ ಮದುವೆ ವಿಚಾರದಲ್ಲಿ ಲೇಡಿ ಪೇದೆ ನಿರಾಕರಣೆ ವ್ಯಕ್ತಪಡಿಸಿದ್ದು, ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಪಿಎಸ್‌ಐ ವೀರೇಶ್ ಆಲೂರು ಅವರು, ಲೇಡಿ ಪೇದೆ ಹಾಗೂ ಅವರ ಕುಟುಂಬಕ್ಕೆ ಸುಮಾರು ₹35 ಲಕ್ಷ ಆರ್ಥಿಕ ನೆರವು ನೀಡಿರುವುದಾಗಿ ಆರೋಪಿಸಿದ್ದಾರೆ. ಮನೆ ನಿರ್ಮಾಣ, ಟ್ರಾಕ್ಟರ್ ಖರೀದಿ ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.


ಇದೇ ವೇಳೆ, ಲೇಡಿ ಪೇದೆ ಜಯಶ್ರೀ ಅವರು ಮೇ 7ರಂದು ರಾಯಚೂರಿನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಪ್ರಕರಣದ ಹಿನ್ನೆಲೆ, ರಾಜಿ ಪಂಚಾಯಿತಿ ನಡೆಸಲು ಪ್ರಯತ್ನಗಳು ನಡೆದಿದ್ದು, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಸಮ್ಮುಖದಲ್ಲಿಯೂ ಮಾತುಕತೆ ನಡೆದಿದೆ. ಅಲ್ಲದೇ, ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿಯೂ ಸಮಾಧಾನ ಸಭೆ ನಡೆದರೂ ಯಾವುದೇ ಸ್ಪಷ್ಟ ಪರಿಹಾರ ಕಂಡುಬಂದಿಲ್ಲ.
ಈ ನಡುವೆ “ನನಗೆ ನ್ಯಾಯ ಬೇಕು” ಎಂದು ಪಿಎಸ್‌ಐ ವೀರೇಶ್ ಆಲೂರು ಮನವಿ ಮಾಡಿಕೊಂಡಿದ್ದಾರೆ.
🟡 (ಸಂಪಾದಕೀಯ ಸೂಚನೆ): ಈ ಪ್ರಕರಣ ಕುರಿತು ಸಂಬಂಧಿಸಿದ ಎರಡೂ ಪಕ್ಷಗಳ ಅಧಿಕೃತ ಪ್ರತಿಕ್ರಿಯೆ ಹಾಗೂ ಪೊಲೀಸ್ ತನಿಖೆಯ ಮಾಹಿತಿ ಹೊರಬಂದ ನಂತರ ಹೆಚ್ಚಿನ ವಿವರಗಳು ಸ್ಪಷ್ಟವಾಗುವ ಸಾಧ್ಯತೆ ಇದೆ












