ಬಡವರ ಬಾರುಕೋಲು ಸುದ್ದಿ
ಮಸ್ಕಿ : ರಾಯಚೂರು ಜಿಲ್ಲೆಯ ಮಸ್ಕಿಯು ಪ್ರಾಚೀನ ಕಾಲದಿಂದಲೂ ಐತಿಹಾಸಿಕ ಸ್ಥಳ ಹಾಗೂ ಪ್ರಸಿದ್ಧ ಪಟ್ಟಣ ಎಂಬುದು ನಮ್ಮ ತಾಲೂಕು,ಜಿಲ್ಲಾ ಆಡಳಿತಕ್ಕೆ ಹಾಗೂ ಜನಪ್ರತಿನಿದಿನಗಳಿಗೆ ಇದು ಗೊತ್ತಿಲ್ಲ ಅನಿಸುತ್ತದೆ.
ಹೌದು ಮೌರ್ಯ ಸಾಮ್ರಾಜ್ಯದ ಶಾಂತಿ ಪ್ರಿಯ ಅರಸ ಅಶೋಕ ಚಕ್ರವರ್ತಿಯ ಹೆಸರು
ದೇವನಾಂಪ್ರಿಯ ಬಿರುದಿನಿಂದ ಅಶೋಕ ಮಹಾರಾಜ ಎಂದು
ಪ್ರಪಂಚಕ್ಕೆ ತಿಳಿಯಪಡಿಸಿದ ಶಿಲಾಶಾಸನವು ಮಸ್ಕಿಯಲ್ಲಿದೆ.
ಇಡೀ ಭಾರತ ದೇಶದ ಬಹುಪಾಲು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಿಕ್ಷಣ ವ್ಯವಸ್ಥೆ ಸಿಬಿಎಸ್ಇ ಯದ್ದಾಗಿದೆ.
ಈ ಶಿಕ್ಷಣ ವ್ಯವಸ್ಥೆಗೆ ಪಠ್ಯಪುಸ್ತಕಗಳನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿರುವುದು ಭಾರತ ಸರಕಾರದ ಶಿಕ್ಷಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ಅತ್ಯುಚ್ಛ ಶಿಕ್ಷಣ ಸಂಸ್ಥೆಯಾದ ಎನ್ಸಿಇಆರ್ಟಿ.ಈ ಸಂಸ್ಥೆಯ “ಲೋಗೋ”ವನ್ನು ಮಸ್ಕಿಯಲ್ಲಿ ಕಾಣಸಿಗುತ್ತದೆ.
ಅದು ಎಲ್ಲಿದೆ ಎಂದರೆ ಎರಡನೇ ಶ್ರೀಶೈಲ ಎಂದು ಪ್ರಖ್ಯಾತಿ ಪಡೆದ ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ,ಇದರ ಜೀರ್ಣೋದ್ದಾರದ ಸಂದರ್ಭದಲ್ಲಿ ದೇವಾಲಯದ ದಕ್ಷಿಣದ ಗೋಡೆಯಲ್ಲಿ ಇತಿಹಾಸ ಸಾರುವ
ಶಿಲ್ಪಗಳು ಇದ್ದು ಇದರ ಜೊತೆಗೆ ಎನ್ಸಿಆರ್ಟಿ ಲಾಂಛನವಿದೆ.
ಈ ಲಾಂಛನ ಕಣ ಶಿಲೆಯ ಚಪ್ಪಡಿ ಕಲ್ಲಿನಿಂದ ರಚಿತಗೊಂಡಿದ್ದು ಕಲ್ಲಿನ ಗೋಡೆಯಲ್ಲಿ ಜೋಡಣೆ ಮಾಡಲಾಗಿದೆ.ಈ ಶಿಲ್ಪದಲ್ಲಿ ಮೂರು ಹಂಸಗಳಿದ್ದು ಅವು ಪರಸ್ಪರ ಒಂದರೊಳಗೊಂದು ತಳುಕು ಹಾಕಿಕೊಂಡಿರುವಂತೆ ಕೆತ್ತಲ್ಪಟ್ಟಿವೆ.ಭಾರತೀಯ ಪರಂಪರೆಯಲ್ಲಿ ಹಂಸವನ್ನು ಜ್ಞಾನದ ಸಂಕೇತವೆಂದೇ ನಂಬಲಾಗಿದೆ.ಹಾಗಾಗಿ ಇಲ್ಲಿರುವ ಮೂರು ಹಂಸಗಳು,ಎನ್ಸಿಇಆರ್ಟಿ ಸಂಸ್ಥೆಯ ಮೂರು ಪ್ರಮುಖ ಕಾರ್ಯಗಳಾದ
1) ಸಂಶೋಧನೆ & ಬೆಳವಣಿಗೆ,2) ತರಬೇತಿ 3) ವಿಸ್ತರಣೆ ಗಳನ್ನು ಪ್ರತಿನಿಧಿಸುತ್ತವೆ ಎಂದು ವಿವರಿಸಲಾಗಿದೆ.
ಶಿಕ್ಷಣದ ಈ ಮೂರು
ಕಾರ್ಯಗಳನ್ನು ಸಂಕೇತಿಸುವ ಈ ಹಂಸಗಳು ಹೀಗೆ ಒಂದರೊಳಗೊಂದು ಪೂರಕವಾಗಿ,ಪರಸ್ಪರ ಪ್ರೇರಕವಾಗಿ ಹೆಣೆದುಕೊಳ್ಳುವ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೊಂದಿರುವ ಮೂಲ ಉದ್ದೇಶದ ಸಾಕಾರಕ್ಕಾಗಿ ದುಡಿಯುತ್ತಿವೆ.
ಕಾಶ್ಮೀರದಿಂದ ಕೇರಳದವರೆಗೆ,ಗುಜರಾತಿನಿಂದ ತ್ರಿಪುರಾದವರೆಗೆ ಇಡೀ ಭಾರತದ ಮಕ್ಕಳು ಸಿಬಿಎಸ್ಇ ಪಠ್ಯಪುಸ್ತಕವನ್ನು ವ್ಯಾಸಂಗ ಮಾಡುತ್ತ,ನಿತ್ಯವೂ ಅವರ ಪಠ್ಯಪುಸ್ತಕಗಳಲ್ಲಿರುವ “ಲೋಗೋ”ವನ್ನು ನೋಡುತ್ತಾರೆ.ದೇಶದ ಎನ್ ಸಿಇಆರ್ಟಿ ಯ ಈ ಮಾತು ಒಂದು ಕಡೆಗಿರಲಿ,ದಕ್ಷಿಣ ಭಾರತೀಯ ರಾಜ್ಯಗಳ ಮಾತಂತಿರಲಿ,ನಮ್ಮ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಬೇಡ ಬಿಡಿ ರಾಯಚೂರು ಜಿಲ್ಲೆಯಲ್ಲಿನ ಸಿಬಿಎಸ್ಇ ಪಠ್ಯಕ್ರಮದ ಶಾಲೆಗಳೂ ಇಲ್ಲಿಗೆ ಹೋದಂತೆ ಕಾಣೆ.
ದೇಶದ ವಿದ್ಯಾರ್ಥಿಗಳು ಹೆಮ್ಮೆಯಿಂದ ಸಂದರ್ಶಿಸುವ ಶೈಕ್ಷಣಿಕ ಮಹತ್ವದ ತಾಣವಾಗಿರುವ ಮಸ್ಕಿಯ ಶಿಲಾಶಾಸನ,ಮಲ್ಲಿಕಾರ್ಜುನ ದೇವಾಲದ ಗೋಡೆಯ ಎನ್ಸಿಇಆರ್ಟಿ “ಲೋಗೊ” ಮತ್ತು ಅಶೋಕ ಶಾಸನವನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆ ಇನ್ನೂ ಮುಂದೆಯಾದರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಒತ್ತಾಯವಾಗಿದೆ.
ಕನಿಷ್ಠ ಮಸ್ಕಿಯ ಇತಿಹಾಸ
ಮನಸ್ಸುಗಳಾದರೂ ಅಭಿವೃದ್ಧಿ ದೃಷ್ಟಿಯಿಂದ
ಮುಂದೆ ಬರುವ ಮೂಲಕ ತಮ್ಮೂರಲ್ಲೇ ಇರುವ ಈ ರಾಷ್ಟ್ರೀಯ ಮಹತ್ವದ ಸ್ಮಾರಕಗಳ ಹತ್ತಿರ ಅವುಗಳ ಮಹತ್ವ ವಿವರಿಸುವ ಒಂದು ಫಲಕವನ್ನಾದರೂ ಬರೆಯಿಸಿ ಹಾಕುವ ಪ್ರಯತ್ನ ಮಾಡಬೇಕಾಗಿದೆ.
ಮಸ್ಕಿ ಪಟ್ಟಣದಲ್ಲಿ
ಎನ್ಸಿಇಆರ್ಟಿ ಲಾಂಛನದ ಶಿಲೆಯನ್ನು ಸ್ಥಾಪಿಸಲು ಸ್ಥಳೀಯ ಆಡಳಿತ,ಜಿಲ್ಲಾ ಆಡಳಿತ ಹಾಗೂ ಜನಪ್ರತಿನಿದಿನಗಳು ಮಂದಾಗಬೇಕು ಏಕೆಂದರೆ
ಎನ್ಸಿಇಆರ್ಟಿ ಸಂಸ್ಥೆಯ “ಲೋಗೋ”ವು ನಮ್ಮ ಮಸ್ಕಿ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನ ದೇವಾಲಯ ಪಡೆದುಕೊಂಡಿದ್ದು ಮಸ್ಕಿಗೆ ಹೆಮ್ಮೆಯ ಸಂಗತಿ.
ಡಾ.ಚನ್ನಬಸಪ್ಪ ಮಲ್ಕಂದಿನ್ನಿ,
ಇತಿಹಾಸ ಉಪನ್ಯಾಸಕರು ಹಾಗೂ ಶಾಸನಗಳ ಸಂಶೋಧಕರು.