ರಾಯಚೂರು ಆ.೧೪.ಕಲ್ಯಾಣ ಕರ್ನಾಟಕ ಭಾಗಕ್ಕೆ ೩೭೧ಜೆ ಒಂದು ವಿಶೇಷವಾದ ಕಾನೂನನ್ನು ನೀಡಿದ್ದು, ಈ ಕಾನೂನಿನಡಿ ಈ ಭಾಗದ ವಿದ್ಯಾರ್ಥಿಗಳಿಗೆ ವಿವಿಧ ವೈದ್ಯಕೀಯ, ಇಂಜಿನಿಯರಿಂಗ್ ಸೀಟುಗಳಲ್ಲಿ ಮೀಸಲಾತಿ ಮತ್ತು ಉದ್ಯೋಗಗಳನ್ನು ನೀಡಲು ಕೂಡ ವಿಶೇಷ ಮೀಸಲಾತಿಯನ್ನು ನೀಡಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ಅವರು ಹೇಳಿದರು.
ಜಿಲ್ಲೆಯ ಸಿಂಧನೂರು ತಾಲೂಕಿನ ತಾಲೂಕಾಡಳಿತ, ಹಾಗೂ ತಾಲೂಕಿನ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಮಣ್ಣು, ನಮ್ಮ ದೇಶ ಹಾಗೂ ಸಿಂಧನೂರಿನ ನಡಿಗೆ ಸ್ವಾತಂತ್ರ್ಯೊತ್ಸವದ ಕಡೆಗೆ ಎಂಬ ವಿಶೇಷ ಕಾರ್ಯಕ್ರಮ, ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗವು ಅತ್ಯಂತ ಹಿಂದುಳಿದಿದ್ದು, ಈ ಭಾಗದ ಜನರಿಗೆ ವಿಶೇಷವಾದ ಸೌಲಭ್ಯಗಳನ್ನು ನೀಡಲಾಗುವುದು. ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುವುದು ಮತ್ತು, ಸರ್ಕಾರಿ ಹುದ್ದೆಗಳಲ್ಲಿ ವಿಶೇಷ ಮೀಸಲಾತಿಯನ್ನು ನೀಡಲಾಗುವುದು. ಈ ಮೀಸಲಾತಿಯು ಎಲ್ಲಾ ಜಾತಿಗಳ ವಿದ್ಯಾರ್ಥಿಗಳಿಗೂ ಸಿಗಲಿದೆ ಎಂದರು ಇದೇ ವೇಳೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸ್ವತಂತ್ರ್ಯ ಪೂರ್ವದಲ್ಲಿ ದೇಶದಲ್ಲಿದ್ದ ಸ್ಥಿತಿಗತಿಗಳ ಬಗ್ಗೆ ಮತ್ತು ಬ್ರಿಟೀಷರ ಆಳ್ವಿಕೆಂಯಿಂದ ದೇಶವು ಮುಕ್ತಗೊಳ್ಳುವಲ್ಲಿ ಹಲವು ಹೋರಾಟಗಾರರ ತ್ಯಾಗ ಬಲಿದಾನವನ್ನು ನಾವೆಲ್ಲರೂ ನೆನೆಯಬೇಕಾಗಿದೆ.
ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉಜ್ವಗೊಳಿಸಿಕೊಳ್ಳಬೇಕು ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಲು ಪಣ ತೊಡಬೇಕು ಎಂದು ತಿಳಿಸಿದರು ನಮ್ಮ ಮಣ್ಣು ನಮ್ಮ ದೇಶ: ಸಿಂಧನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಂದ ಸಂಗ್ರಹಿಸಿ ತರಲಾದ ಮಣ್ಣನ್ನು ಕಳಶದಲ್ಲಿ ಶೇಖರಿಸಿ ರಾಷ್ಟ್ರ ರಾಜಧಾನಿಗೆ ಕಳುಹಿಸುವ ನಿಟ್ಟಿನಲ್ಲಿ ನಮ್ಮ ಮಣ್ಣ ನಮ್ಮ ದೇಶ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕು ಸ್ಥಾಪನೆ: ಲೋಕೋಪಯೋಗಿ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಅಡಿಗಲ್ಲು, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ವಸತಿ ನಿಲಯದ ಹೆಚ್ಚುವರಿ ಕಟ್ಟಡ , ರೌಡಕುಂದ ಗ್ರಾಮದ ೧೭೮೦ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಜಲಜೀವನ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಸ್.ಪಿ ನಿಖಿಲ್.ಬಿ, ಲಿಂಗಸುಗೂರು ಸಹಾಯಕ ಆಯುಕ್ತ ಶಿಂಧೆ ಅವಿನಾಶ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.