ಏಪ್ರಿಲ್ 26. ಮೇ ಹತ್ತರಂದು ರಾಜ್ಯದ್ಯಂತ 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಳ್ಳಾರಿಗೆ ಮತ ಯಾಚನೆಗೆ ಆಗಮಿಸಿದ ಕೆ.ಆರ್.ಪಿ.ಪಿ ಅಭ್ಯರ್ಥಿ ಜಿ.ಲಕ್ಷ್ಮಿ ಅರುಣ ಅವರಿಗೆ ಸ್ಥಳೀಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಪ್ರದಾಯದ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದೆ.
ಕೆಆರ್ಪಿಪಿ ಬಳ್ಳಾರಿ ನಗರ ಅಭ್ಯರ್ಥಿ ಜಿ ಲಕ್ಷ್ಮಿ ಅರುಣಾ ಅವರು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮುಸ್ಲಿಂ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಆಶೀರ್ವಾದ ಪಡೆದರು.
ರೇಣುಕಾ ನಗರಕ್ಕೆ ಪ್ರಚಾರಕ್ಕೆ ಬಂದಿದ್ದ, ಜಿ.ಲಕ್ಷ್ಮಿ ಅರುಣ ಅವರಿಗೆ ಹರ್ಷಿಯಾ ಬಾನು ಮತ್ತು ದಾದಾಪೀರ್ ಕುಟುಂಬದವರು ಸಾಂಪ್ರದಾಯಿಕವಾಗಿ ಇಂದು ಆಚರಣೆಯಂತೆ ಹೊಸ ಸೀರೆ ಆಹಾರ ಧಾನ್ಯ ಅರಿಶಿಣ ಕುಂಕುಮ ಜೊತೆಗೆ ಉಡಿ ತುಂಬವ ಮೂಲಕ ಆಶೀರ್ವಾದ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಲಕ್ಷ್ಮಿ ಅರುಣಾ ಅವರು ಸಂತಸ ವ್ಯಕ್ತಪಡಿಸಿದ್ದು, ‘ಬಸವಣ್ಣನವರು ಪ್ರತಿಪಾದಿಸಿದ ಕಲ್ಯಾಣ ಲೋಕದ ಪರಿಕಲ್ಪನೆಯನ್ನು ಜಾರಿಗೆ ತರುವ ಮೂಲಕ ನಮ್ಮ ಪಕ್ಷದ ಧ್ಯೇಯವಾಗಿದೆ. ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ಒಂದೇ.”
ಗಣಿ ನಾಡು ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿರುವ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯುತ್ತಿದ್ದಾರೆ. ರೆಡ್ಡಿ ಬಳ್ಳಾರಿ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿರುವುದರಿಂದ ಅವರು ಏಕಾಂಗಿಯಾಗಿ ಪ್ರಚಾರ ಮಾಡುತ್ತಿರುವುದರಿಂದ ಮತದಾರರ ಅನುಕಂಪದ ಅಲೆಯ ಕೂಡ ಹೆಚ್ಚಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ನಗರವು ರಾಜ್ಯದ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಲಕ್ಷ್ಮಿ ಅರುಣಾ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ.