ರಾಯಚೂರು,ಏ.11 ಮಾ.29ರಂದು ಭಾರತ ಚುನಾವಣಾ ಆಯೋಗದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ವೇಳಾಪಟ್ಟಿಯನ್ನು ನಿಗಧಿಪಡಿಸಿ ಪ್ರಕಟಣೆ ಹೊರಡಿಸಲಾಗಿದ್ದು, ಮಾ.29ರಿಂದ ಚುನಾವಣಾ ಮಾದರಿ ನೀತಿ ಸಂಹಿತೆಯ ಅನುನಗೊಂಡಿದೆ. ಚುನಾವಣೆಯ ಮುಂದಿನ ಹಂತವಾಗಿ ಏ.13ರಿಂದ ಏ.20ರವರೆಗೆ ಪ್ರತಿದಿನ ಬೆಳಿಗ್ಗೆ 11:00 ರಿಂದ ಮದ್ಯಾಹ್ನ 03:00 ಗಂಟೆಯವರೆಗೆ( ರಜಾ ದಿನಗಳನ್ನು ಹೊರತುಪಡಿಸಿ) ನಾಮ ಪತ್ರ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಅವರು ಹೇಳಿದರು.
ಅವರು ಏ.11ರ(ಮಂಗಳವಾರ) ನಗರದ ತಹಸೀಲ್ ಕಾರ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿ, ಏ.13ರಿಂದ ಏ.20ರವರೆಗೆ ಪ್ರತಿದಿನ ಬೆಳಿಗ್ಗೆ 11:00 ರಿಂದ ಮದ್ಯಾಹ್ನ 03:00 ಗಂಟೆಗಳವರೆಗೆ(ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ ಎಂದರು.
ಇದೇ ವೇಳೆ ಪೂರ್ವ ತಯಾರಿ ಕುರಿತು ರಾಯಚೂರು ತಾಲ್ಲೂಕಿನ 53 -ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತು 54 – ರಾಯಚೂರು (ನಗರ) ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ರಾಜಕೀಯ ಪಕ್ಷದವರಿಗೆ ನಾಮ ಪತ್ರಸಲ್ಲಿಕೆಯ ಕುರಿತು ಮತ್ತು ಚುನಾವಣೆ ವೆಚ್ಚಗಳ ನಿರ್ವಹಣೆ, ಚುನಾವಣೆ ಪ್ರಚಾರ, ಇತ್ಯಾದಿ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ಎಲ್ಲಾ ರಾಜಕೀಯ ಪಕ್ಷದವರಿಗೆ ವಿದ್ಯುನ್ಮಾನ ಮತಯಂತ್ರಗಳ ಅಣಕು ಮತದಾನ ಪ್ರಕ್ರಿಯೆಯನ್ನು ಜರುಗಿಸಲಾಯಿತು.
53 ರಾಯಚೂರು ಗ್ರಾಮೀಣ – ಮತಕ್ಷೇತ್ರದ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯನ್ನು ತಹಸೀಲ್ ಕಛೇರಿ ರಾಯಚೂರು ನಲ್ಲಿ ಮತ್ತು 54 -ರಾಯಚೂರು ವಿಧಾನ ಸಭಾ ಮತಕ್ಷೇತ್ರದ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯನ್ನು ಸಹಾಯಕ ಆಯುಕ್ತರು ಕಾರ್ಯಾಲಯ ರಾಯಚೂರುನಲ್ಲಿ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ್, ತಹಶೀಲ್ದಾರ ಚನ್ನಮಲ್ಲಪ್ಪ ಗಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.