ಸಿರುಗುಪ್ಪ : ನಗರದಲ್ಲಿ ಮಳೆಗಾಲದಲ್ಲಿ ರಸ್ತೆ ಮೇಲೆ ಹರಿಯುವ ನೀರಿನಿಂದ ಅಲ್ಲಿನ ನಿವಾಸಿಗಳು ರಸ್ತೆಯಲ್ಲಿ ಪರದಾಡುತ್ತಿರುವುದು ವರದಿಯಾಗಿದ್ದರಿಂದ ಸದಾಶಿವ ನಗರದಿಂದ ಡ್ರೆವರ್ ಕಾಲೋನಿಗೆ ನಗರೋತ್ಥಾನ ಪೇಸ್-೩ ಸೇವಿಂಗ್ಸ್ ಗ್ರಾಂಟ್ನಡಿ ಅಂದಾಜು ಮೊತ್ತ ೭೮.೪೮ ಲಕ್ಷ ವೆಚ್ಚದ ಅನುದಾನದಲ್ಲಿ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ದಿ ಕಾಮಗಾರಿಗೆ ಅನುಮೋದನೆ ದೊರೆತಿದೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷತೆಯಿಂದಾಗಿ ಚರಂಡಿ ನಿರ್ಮಿಸದೇ ರಸ್ತೆ ಅಭಿವೃದ್ದಿಗೊಳಿಸಿದ್ದರಿಂದ ದೂರದ ಜಮೀನುಗಳಿಂದ ಹರಿದು ಬರುವ ಮಳೆ ನೀರಿಗೆ ರಸ್ತೆ ಬದಿಯ ಮಣ್ಣು ಕುಸಿಯುತ್ತಿದಲ್ಲದೇ ನೀರಿಗೆ ಕೊಚ್ಚಿ ಹೋಗುತ್ತಿದೆ.
ಗುತ್ತಿಗೆದಾರರು ಅಧಿಕಾರಿಗಳು ಯೋಜನೆ ರೂಪಿಸದ ಕಾರಣ ಹೇಳಿ ನುಣುಚಿಕೊಂಡರೆ ಸಂಬಂದಿಸಿದ ಅಧಿಕಾರಿಗಳು ಚುನಾವಣೆ ನೆಪವನ್ನು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ.
ಚರಂಡಿ ನಿರ್ಮಾಣವಾದ ಮೇಲೆ ರಸ್ತೆ ಅಭಿವೃದ್ದಿ ಮಾಡುವುದು ಸಾಮಾನ್ಯ ಆದರೆ ಇಲ್ಲಿ ಉಲ್ಟಾ ಆಗಿದೆ. ಇನ್ನೂ ಕೆಲ ಖಾಸಗಿ ವ್ಯಕ್ತಿಗಳು ತಮ್ಮ ಖಾಲಿ ನಿವೇಶನ ಇರುವುದೆಂದು ರಸ್ತೆಯನ್ನೇ ಕಿರಿದಾಗಿಸಿದ್ದು ಮುಂದಿನ ದಿನಗಳಲ್ಲಿ ಚರಂಡಿ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅನೇಕ ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ದಿ, ಚರಂಡಿ ನಿರ್ಮಾಣದಂತಹ ಅಭಿವೃದ್ದಿ ಕಾರ್ಯಗಳು ಆಮೆಗತಿಯಲ್ಲಿ ಸಾಗಿದ್ದು, ಚರಂಡಿಯಿಲ್ಲದೇ ಕೇವಲ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ. ಇನ್ನೊಂದೆಡೆ ರಸ್ತೆ ಅಭಿವೃದ್ದಿಗಾಗಿ ಜಲ್ಲಿಕಲ್ಲು ಹಾಕಿ ಹಲವು ತಿಂಗಳುಗಳೇ ಕಳೆದರೂ ಪೂರ್ಣಗೊಳ್ಳದ ಕಾಮಗಾರಿಗಳು ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿವೆ.
ಮುಂದಿನ ದಿನಗಳಲ್ಲಾದರೂ ಸಂಬಂದಿಸಿದ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂಬುದು ಸ್ಥಳೀಯರಾದ ರಾಮಪ್ಪ, ಹನುಮಂತ, ನಾಗರಾಜರ ಒತ್ತಾಯವಾಗಿದೆ.
೫-ಸಿರುಗುಪ್ಪ-೧ : ಸಿರುಗುಪ್ಪ ನಗರದ ಡ್ರೆವರ್ ಕಾಲೋನಿಗೆ ಚರಂಡಿಯಿಲ್ಲದೇ ಅಭಿವೃದ್ದಿಗೊಳಿಸಿದ ರಸ್ತೆಯ ಬದಿ ಕುಸಿದಿರುವುದು