ರಾಯಚೂರು,ಜೂ.೨೦,(ಕ.ವಾ):- ಜನತಾ ದರ್ಶನ ಕಾರ್ಯಕ್ರಮವನ್ನು ಯಾವುದೇ ಲೋಪದೋಷಗಳಿಲ್ಲದಂತೆ ಅಚ್ಚುಕಟ್ಟಾಗಿ ನಡೆಯುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಾದ ಡಾ.ದುರುಗೇಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜೂ.೨೦ರ ಗುರುವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಆಯಾ ತಹಶೀಲ್ದಾರರು ತಮ್ಮ ತಾಲೂಕಿನ ಒಂದು ಸ್ಥಳವನ್ನು ನಿಗದಿ ಮಾಡಿ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಸಲ್ಲಿಸುವ ದೂರುಗಳು ಮತ್ತು ಅಹವಾಲುಗಳನ್ನು ಸರಿಯಾಗಿ ನೋಂದಾಯಿಸಿಕೊಂಡು ಸಾಧ್ಯವಾದಲ್ಲಿ ಸ್ಥಳದಲ್ಲಿಯೇ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ವಾರದೊಳಗೆ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದರು.
ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪೌತಿ ಖಾತೆ, ಜನನ, ಮರಣ ಪ್ರಮಾಣ ಪತ್ರಗಳ ಸಮಸ್ಯೆಗಳಿದ್ದಲ್ಲಿ ಅದನ್ನೂ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾನಾ ಪಿಂಚಿಣಿ ಪಡೆಯಲು ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಮಂಜೂರಾತಿ ಪತ್ರ ವಿತರಿಸಲು ಸೂಕ್ತ ಕ್ರಮ ವಹಿಸಬೇಕು. ಸಾರ್ವಜನಿಕರು ಕೆಲಸದ ನಿಮಿತ್ತ ಕಚೇರಿಗೆ ಬಂದಾಗ ಅವರ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ವಿನಾಕಾರಣ ಅಲೆಸಬೇಡಿ. ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯ. ಕಂದಾಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ಟ್ಯಾಬ್ಗಳ ಸಹಿತ ರೈತರ ಬಳಿ ತೆರಳಿ ಆಧಾರ್ ಜೋಡಣೆ ಕ್ರಮವಹಿಸುವಂತೆ ಸೂಚಿಸಿದರು.ರಾಜ್ಯದಲ್ಲಿ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯದಲ್ಲಿ ಕೋಲಾರ ಮೊದಲ ಸ್ಥಾನದಲ್ಲಿದ್ದು, ರಾಯಚೂರು ಜಿಲ್ಲೆಯು ೬ಸ್ಥಾನದಲ್ಲಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಜೋಡಣೆ ಕಾರ್ಯ ಮಾಡಿ ಸ್ಥಾನವನ್ನು ಹೆಚ್ಚಿಸಬೇಕು. ಪ್ರಸ್ತುತ ರಾಯಚೂರು ಜಿಲ್ಲೆಯಲ್ಲಿ ೮,೧೬,೨೨೭ ಕಾರ್ಡ್ಗಳು ಜೋಡಣೆಯಾಗಿದ್ದು, ಲಿಂಗಸೂಗೂರು ೧.೧೨,೨೬೩, ದೇವದುರ್ಗ-೧,೪೦,೨೬೦, ರಾಯಚೂರು-೧,೭೬,೯೪೦, ಮಾನ್ವಿ-೮೦,೨೭೦, ಸಿಂಧನೂರು-೧,೪೫,೭೩೦, ಮಸ್ಕಿ-೯೨,೬೨೩, ಸಿರವಾರ-೬೮,೧೩೫ರಷ್ಟು ಜೋಡಣೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಜೋಡಣೆ ಮಾಡಬೇಕೆಂದರು.
ಲ್ಯಾಂಡ್ ಬೀಟ್ ಪ್ರಗತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೨೬,೭೨೨ ಅರ್ಜಿಗಳ ಪೈಕಿ ೯,೫೧೫ ಅರ್ಜಿಗಳನ್ನು ತಹಶೀಲ್ದಾರ್ ಅನುಮೋದಿಸಿದ್ದು, ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮವಹಿಸಬೇಕು. ಅಲ್ಲದೆ ಜಿಲ್ಲಾ ತಹಶೀಲ್ದಾರರ ನ್ಯಾಯಾಲಯದಲ್ಲಿ ಬಾಕಿ ಇರುವ ಕೇಸ್ಗಳನ್ನು ವೇಗವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತ ಅವಿನಾಶ್ ಶಿಂಧೆ, ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸಿಂಧನೂರು ತಹಶೀಲ್ದಾರ್ ಅರುಣ್ ದೇಸಾಯಿ, ಲಿಂಗಸೂಗೂರು ತಹಶೀಲ್ದಾರ್ ಶಂಶಲಾ, ಮಾನವಿ ತಹಶೀಲ್ದಾರ್ ರವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ಸೂಗೂರೇಶ್ ದೇಸಾಯಿ, ಬಾಬರ್ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಸಭೆಯಲ್ಲಿಇದ್ದರು.