ರಾಯಚೂರು,ಮಾ.29(ಕ.ವಾ):- ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇಂದಿನಿಂದ ಜಾರಿಯಾಗಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ವೆಬ್ಸೈಟ್ನಲ್ಲಿ ಶಾಸಕರು, ಸಂಸದರು, ಜನಪ್ರತಿನಿಧಿಗಳ ಭಾವಚಿತ್ರ ಮಾಹಿತಿಗಳಿದ್ದರೆ ಅದನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಹೊಸ ಕಾಮಗಾರಿಗಳು, ಟೆಂಡರ್ಗಳನ್ನು ಕರೆಯುವುದಾಗಲಿ ಮಾಡಬಾರದು, ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಸರ್ಕಾರದ ಕಾರ್ಯಕ್ರಮಗಳಾಗಲಿ, ಸಭೆ ಸಮಾರಂಭಗಳನ್ನು ಮಾಡುವಂತಿಲ್ಲ ಜೊತೆಗೆ ಯಾವುದೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿರುತ್ತದೆ. ಅಂತ ನಿಯಮಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಒಟ್ಟಾರೆಯಾಗಿ ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ವ್ಯವದ್ಥಿತವಾಗಿ ನಡೆಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.