ಮೇ 13.ಸಿರುಗುಪ್ಪ ವಿಧಾನಸಭೆ ಚುನಾವಣೆಯ ೯೨ ಕ್ಷೇತ್ರದ ಫಲಿತಾಂಶದಲ್ಲಿ ೩೭೦೩೩ ಸಾವಿರಕ್ಕೂ ಅಧಿಕ ಅಂತರ ಮತಗಳಿಂದ ವಿಜೇತರಾದ ಕಾಂಗ್ರೇಸ್ ಅಭ್ಯರ್ಥಿ ಬಿ.ಎಮ್.ನಾಗರಾಜ್ ಅವರ ನಿವಾಸದೆದುರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಸಿರುಗುಪ್ಪ ವಿಧಾನಸಭಾ ಕ್ಷೇತ್ರವನ್ನು ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ೨೦೦೪ರಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳಾಗಿದ್ದ ಮಾಜಿ ಶಾಸಕರಾದ ಎಂ.ಶಂಕರರೆಡ್ಡಿ, ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ ಅವರ ವಿರುದ್ದ ಗೆದ್ದು ಕಮಲ ಅರಳಿಸಿ ಅಸೆಂಬ್ಲಿ ಪ್ರವೇಶ ಪಡೆದರಲ್ಲದೇ ಎರಡನೇ ಸಲವೂ ಪರಿಶಿಷ್ಟ ಪಂಗಡ ಮೀಸಲಾತಿ ಕ್ಷೇತ್ರವಾದ ನಂತರವೂ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಮ್. ನಾಗರಾಜರ ವಿರುದ್ದ ಗೆಲುವಿನ ನಗೆ ಬೀರಿದ್ದರು.
ನಂತರದ ೨೦೧೩ರ ಚುನಾವಣೆ ವೇಳೆ ವಿಜೇತರಾದ ಬಿ.ಎಮ್.ನಾಗರಾಜರು ಕ್ಷೇತ್ರದ ಅಭಿವೃದ್ದಿ ಜೊತೆಗೆ ತಾಲೂಕಿನ ಜನರ ವಿಶ್ವಾಸ ಗಳಿಸಿದ್ದರು. ೨೦೧೮ರ ವೇಳೆ ಕಾರಣಾಂತರಗಳಿAದ ಅಭ್ಯರ್ಥಿ ಸ್ಥಾನದಿಂದ ಹಿಂದೆ ಸರಿದು ದೂರ ಉಳಿದಿದ್ದರಿಂದ ಪಕ್ಷವು ಬಿ.ಮುರುಳಿಕೃಷ್ಣ ಅವರನ್ನು ಸ್ಪರ್ಧೆಗಿಳಿಸಿತ್ತು. ಸ್ಥಳೀಯ ಅನುಭವದ ಕೊರತೆಯಿದ್ದರಿಂದ ಸೋಲುಂಟಾಗಿತ್ತು.
ಈ ಸಲ ಟಿಕೆಟ್ ಹಂಚಿಕೆಯಲ್ಲಿ ನಡೆದ ಕಸರತ್ತಿನ ಕೊನೆ ಘಳಿಗೆಯಲ್ಲಿ ಮುರುಳಿಕೃಷ್ಣರಿಗೆ ಹೈಕಮಾಂಡ್ ಕಣದಿಂದ ಹಿಂದೆ ಸರಿಸಿ ಟಿಕೆಟ್ ನೀಡಿದ್ದು ಸ್ಥಳೀಯರಾದ ಬಿ.ಎಮ್.ನಾಗರಾಜ್ ಅವರಿಗೆ ಶತಾಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
ಗೆಲುವು ದೊರೆಯುವ ಬಗ್ಗೆ ಪಕ್ಷದಿಂದಲೇ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಮತ ಎಣಿಕೆಯ ಪ್ರಾರಂಭದಿಂದ ಕೊನೆಯವರೆಗೂ ಗೆಲುವಿನ ಮುನ್ನಡೆ ಕಾಯ್ದುಕೊಂಡಿದ್ದು ಸುಲಭದ ಗೆಲುವು ತಂದುಕೊಟ್ಟಿದ್ದರಿಂದ ಅಭಿಮಾನಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣವುಂಟಾಗಿದ್ದು ಪರಸ್ಪರ ಬಣ್ಣ ಎರಚಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.