ಸಿರುಗುಪ್ಪ : ದಾರಿ ಬಿಡಿ ಕಾಂಗ್ರೇಸ್ಸಿಗರೇ ಮತ್ತೇ ಬರ್ತಾ ಇದ್ದೇವೆ, ಈ ಕನ್ನಡನಾಡಿನ ತಾಯಿ ಭುವನೇಶ್ವರಿಯ ಸೇವೆಯೊಂದಿಗೆ ಬಡಜನರ ಸೇವೆ, ದೀನದಲಿತರಿಗೆ ನ್ಯಾಯ ನೀಡಲು ಬರ್ತಿದ್ದೇವೆ, ಸಿರುಗುಪ್ಪದ ಸಮಗ್ರ ಅಭಿವೃದ್ದಿಗೆ ಮತ್ತೇ ಬರ್ತಿದ್ದಾರೆ, ತಾಕತ್ತಿದ್ದರೆ ಬಿಜೆಪಿಯ ಸುನಾಮಿಯನ್ನು, ಬಿರುಗಾಳಿಯನ್ನು ಧಮ್ಮಿದ್ರೆ ತಡೀರಿ ನೋಡೋಣವೆಂದು ಸವಾಲ್ ಹಾಕಿದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ಬಿಜೆಪಿ ಸರ್ಕಾರ ಬರೋದು ನಿಶ್ಚಿತವೆಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ತಾಲೂಕು ಕ್ರೀಡಾಂಗಣದಿಂದ ಮಹಾತ್ಮ ಗಾಂಧೀಜಿ ವೃತ್ತದವರೆಗೂ ರೋಡ್ ಶೋ ನಡೆಸುವ ಮೂಲಕ ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಪರ ಅಬ್ಬರದ ಮತಯಾಚನೆ ನಡೆಸಿ ೩೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಮನವಿ ಮಾಡಿದರು.
ನಂತರ ಮಾತನಾಡಿದ ಅವರು ತಾಲೂಕಿನಾದ್ಯಂತ ಸಾರ್ವಜನಿಕರಿಗೆ ಬಸ್ನಿಲ್ದಾಣ, ಕುಡಿಯುವ ನೀರಿನ ಕೆರೆ, ರಸ್ತೆ, ಚರಂಡಿ, ಸೇತುವೆ, ರೈತರ ಜಮೀನುಗಳಿಗೆ ಏತ ನೀರಾವರಿ, ಅವರ ಮಕ್ಕಳಿಗೆ ವಸತಿಯುತ ಶಾಲೆ, ಕಾಲೇಜ್, ಬಸವೇಶ್ವರ ಪುತ್ಥಳಿ, ಶೀ ಕನಕದಾಸ ಭವನ, ಶ್ರೀ ವಾಲ್ಮೀಕಿ ಭವನ, ಡಾ.ಬಿ.ಆರ್.ಅಂಬೇಡ್ಕರರ ಭವನ ಸೇರಿ ಇನ್ನಿತರ ತಾಲೂಕಿನ ಸಮಗ್ರ ಅಭಿವೃದ್ದಿಗೆ ನಾಂದಿ ಹಾಡಿದ ಜನನಾಯಕನನ್ನು ಮತ್ತೊಮ್ಮೆ ಗೆಲ್ಲಿಸಿ ಅಭಿವೃದ್ದಿಗೆ ಸಹಕರಿಸಬೇಕೆಂದರು.
ತಮ್ಮ ಸುಧೀರ್ಘ ಭಾಷಣದಲ್ಲಿ ಈ ಹಿಂದೆ ಕರ್ನಾಟಕದಲ್ಲಿ ೭೨ ವರ್ಷದಲ್ಲಿ ೨೫ಲಕ್ಷ ಮನೆಗೆ ಕುಡಿಯುವ ನೀರು ಸಿಕ್ಕಿತು ಅದರೆ ನಮ್ಮ ಸರ್ಕಾರ ಬಂದ ಮೇಲೆ ಕೇವಲ ಮೂರು ವರ್ಷದಲ್ಲೇ ೪೦ ಲಕ್ಷ ಮನೆಗಳಿಗೆ ಮನೆ ಮನೆಗೆ ಗಂಗಾ ಯೋಜನೆಯಡಿ ಕುಡಿಯುವ ನೀರು ಕಲ್ಪಿಸಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಯಿತು.
ಬಡವರ ಪರ ಕಾಳಜಿಯಿಂದಾಗಿ ೧೧ ಲಕ್ಷ ಜನ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸಂಧ್ಯಾ ಸುರಕ್ಷ ಯೋಜನೆ, ಅಂಗವಿಕಲರ ಮಾಶಾಸನ, ವಿಧವಾ ಮಾಶಾಸನ, ಹೆಚ್ಚಳ ಮುಖ್ಯಮಂತ್ರಿಯಾದ ನಾಲ್ಕು ಗಂಟೆಯಲ್ಲಿ ಜಾರಿಗೆ ತಂದಿದ್ದೇನೆ.
ಕೇವಲ ರೈತರ ಮಕ್ಕಳಿಗಷ್ಟೇ ಅಲ್ಲದೇ ಮೀನುಗಾರರ, ನೇಕಾರರ,ಆಟೋ ಚಾಲಕರ ಮಕ್ಕಳಿಗೂ ವಿದ್ಯಾವೇತನವನ್ನು ಜಾರಿ ಮಾಡಿದ್ದೇವೆ. ೩ಲಕ್ಷ ಮಹಿಳೆಯರಿಗೆ ಕೆಲಸ ನೀಡುವಂತಹ ಸ್ತಿ ಸಾಮರ್ಥ್ಯ ಯೋಜನೆ, ಯುವ ಸಮೂಹದ ಉದ್ಯೋಗ ಹೆಚ್ಚಳಕ್ಕೆ ವಿವೇಕನಂದರ ಯುವಶಕ್ತಿ ಸಾಮರ್ಥ್ಯ ಯೋಜನೆ ಜಾರಿಗೆ ತರಲಿದ್ದೇವೆ.
ಮೀಸಲಾತಿ ವಿಚಾರವಾಗಿ ಮಾತೆತ್ತಿದರೆ ಜೇನುಗೂಡಿಗೆ ಕೈಹಾಕಬೇಡಿ ಎನ್ನುತ್ತಿದ್ದ ವಿಪಕ್ಷಗಳು. ಜೇನುಹುಳುಗಳು ಕಡಿದರೂ ಪರವಾಗಿಲ್ಲ ಜೇನುಗೂಡಿಗೆ ಕೈಹಾಕಿ ಬಂದ ಜೇನನ್ನು ದೀನದಲಿತರಿಗೆ ನೀಡುವ ಮೂಲಕ ನಾನು ಉತ್ತರ ಕರ್ನಾಟಕದಿಂದ ಬಂದ ಗಂಡು ಎಂದು ಕಾಂಗ್ರೇಸ್ಸಿನವರಿಗೆ ತೋರಿಸಿದ್ದೇನೆಂದು ನುಡಿದರು.
ಇಷ್ಟು ದಿನಗಳ ಕಾಲ ಬರೀ ಮತ ಪಡೆಯಲಷ್ಟೇ ಪರಿಶಿಷ್ಟರನ್ನು ಬಳಸಿಕೊಳ್ಳುತ್ತಿತ್ತು ಕಾಂಗ್ರೇಸ್, ಆದರೆ ಈಗ ಬಸವರಾಜ್ ಬೊಮ್ಮಾಯಿ ಗೌತಮಬುದ್ದ, ವಾಲ್ಮೀಕಿ, ಬಸವಣ್ಣ, ಕನಕದಾಸರ ಪ್ರೇರಣೆಯಿಂದಾಗಿ ಎಸ್.ಸಿ ಎಸ್.ಟಿ, ಮೀಸಲಾತಿ ಹೆಚ್ಚಳ ಮಾಡಿದ್ದಾನೆ.
ಮೀಸಲಾತಿ ಕೊಡಲಾಗದ ಕಾಂಗ್ರೇಸ್ ನಾಯಕರು ಇವತ್ತ ಹೇಳುತ್ತಿದ್ದಾರೆ ಬಿಕ್ಷೆಯೆಂದು ನಾನು ಕೇಳುತ್ತಿದ್ದೇನೆ ದೀನದಲಿತರು ಬಿಕ್ಷಕರಾ..?, ಹಿಂದುಳಿದ ವರ್ಗದವರು ಬಿಕ್ಷಕರಾ? ಕರ್ನಾಟಕದವರು ಬಿಕ್ಷಕರಾ…? ನ್ಯಾಯಸಮ್ಮತವಾಗಿ ಬಾಬಾ ಸಾಹೇಬ್ ಅಂಬೇಡ್ಕರರು ಕೊಟ್ಟಿರುವಂತಹ ಹಕ್ಕನ್ನು ನೀಡಿದ್ದೇವೆಯೇ ಹೊರತು ಬಿಕ್ಷೆಯನ್ನಲ್ಲಾ. ಈ ನಾಡಿನ ಜನತೆ ಸ್ವಾಭಿಮಾನದ ಜನತೆ ಕೆಣಕ್ಕಿದ್ದೀರಿ ಈ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆಂದರು.