ರಾಯಚೂರು,ಏ.27(ಕ.ವಾ):- ಮತದಾನವೆಂಬುವುದು ಪ್ರತಿಯೊಬ್ಬರು ಹಕ್ಕು ಹಾಗೂ ಜವಬ್ದಾರಿಯಾಗಿದ್ದು, ಮುಖ್ಯವಾಗಿ ಕಾರ್ಮಿಕರು ಮತ್ತು ರೈತರು ಈ ದೇಶದ ಅತಿ ದೊಡ್ಡ ಶಕ್ತಿಯಾಗಿದ್ದಾರೆ. ಅವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಆದ ಶಶಿಧರ ಕುರೇರ ಅವರು ಹೇಳಿದರು.
ಅವರು ಏ.27ರ(ಗುರುವಾರ) ನಗರದ ಹೊರ ವಲಯದ ಶಿಲ್ಪಾ ಮೆಡಿಕೇರ್ ಹಾಗೂ ರಾಯ್ಕೇಮ್ ಮೆಡಿಕೇರ್ ಕಂಪನಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಹಾಗೂ ಅಂಶಗಳನ್ನು ಅರಿತುಕೊಂಡು, ಉತ್ತಮ ಸರ್ಕಾರವನ್ನು ರಚನೆ ಮಾಡಲು ದೇಶದ ಪ್ರತಿಯೊಬ್ಬರ ಪ್ರಜೆಗೂ ನೀಡಲಾದ ಅಧಿಕಾರವನ್ನು ಹಾಗೂ ಜವಾಬ್ದಾರಿಯನ್ನು ನಿಭಾಯಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಅವರು ಮತದಾರರ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮಾತನಾಡಿ, ದೇಶದ ಆರ್ಥಿಕತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವವಾಗಿದ್ದು, ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ದೇಶ ಉತ್ತಮವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹ್ಮದ್ ಜಿಲಾನಿ ಸೇರಿದಂತೆ ಕಂಪನಿಗಳ ಮುಖ್ಯಸ್ಥರು, ಅಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.