ಮೇ 31. ಬಿಸಿಲು ನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ಸಂವಿಧಾನ ಶಿಲ್ಪಿಗಳಾದ ಅಂಬೇಡ್ಕರ್ ಅವರು ಜ್ಞಾನದ ಕಣಜಗಳಾಗಿದ್ದಾರೆ. ಅವರು ಪಡೆದ ಪದವಿಗಳು ಹಾಗೂ ಅವರು ಓದಿನಲ್ಲಿ ಹೊಂದಿದ್ದ ಅಭಿರುಚಿ ನಮಗೆಲ್ಲ ಮಾದರಿಯಾಗಬೇಕು. ಶಿಕ್ಷಣವು ಅಮೂಲ್ಯವಾದದ್ದು ನೀವೆಲ್ಲಾ ತಪ್ಪದೇ ಶಾಲೆಗೆ ಬಂದು ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಹಶಿಕ್ಷಕರಾದ ವಿರೂಪಾಕ್ಷಪ್ಪ ಪಕೀರಪೂರ ಅವರು ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಕಾಸಿಸುವಂತೆ ಮಾಡುತ್ತವೆ. ಗ್ರಂಥಾಲಯಗಳು ಮಕ್ಕಳಲ್ಲಿ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಸಹಕಾರಿ ಅದಕ್ಕಾಗಿ ಗ್ರಂಥಾಲಯದ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗುಡದಪ್ಪ ಅವರು ಶಾಲೆಯಲ್ಲಿ ಮಕ್ಕಳ ಗ್ರಂಥಾಲಯವನ್ನು ಪ್ರಾರಂಭ ಮಾಡಿದ್ದು ತುಂಬಾ ಸಂತೋಷವಾಗಿದೆ. ನಮ್ಮ ಗ್ರಾಮದ ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಗೆ ದಾನಿಗಳು ನೀಡಿದ ಮೂರು ಟೇಬಲ್, ಎರಡು ಬೆಂಚ್, ಗ್ರಂಥಾಲಯ ಟೇಬಲ್, ಎರಡು ಕಪಾಟು ಗಳು ಸೇರಿದಂತೆ ಒಟ್ಟು ೨೫೦೦೦ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಶಾಲೆಗೆ ಸ್ವೀಕಾರ ಮಾಡಿದರು. ಇದೇ ಸಂದರ್ಭದಲ್ಲಿ ಮಾಜಿ sdmc ಅಧ್ಯಕ್ಷರಾದ ಲಕ್ಷ್ಮಣ ಅವರು ಮಾತನಾಡಿ ದಾನಿಗಳು ನೀಡುವ ಸಹಕಾರದಿಂದ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಭಾಗ್ಯಮ್ಮ ಹಾಗೂ ಅಡುಗೆ ಸಿಬ್ಬಂದಿಗಳಾದ ರೇಣುಕಾ ಹಾಗೂ ನರಸಮ್ಮ, ಗ್ರಾಮಸ್ಥರು,ಪಾಲಕರು ಅವರು ಉಪಸ್ಥಿತರಿದ್ದರು