ರಾಯಚೂರು ಅ 13.ಜಿಲ್ಲೆಯಲ್ಲಿ ಅಕ್ರಮವಾಗಿ, ಪರವಾನಿಗೆ ಇಲ್ಲದೇ ಕೂಡಿಟ್ಟ ಪಟಾಕಿಗಳ ಬಗ್ಗೆ ಪ್ರಕರಣಗಳನ್ನು ದಾಖಲಿಸಿಕೊಳ್ಳಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಸಿಂಧನೂರು ತಾಲೂಕಿನ ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಳ್ಳಿ ಕ್ಯಾಂಪಿನ ಸತ್ಯನಾರಾಯಣ ಶೆಟ್ಟಿ ಇವರ ಮನೆಯನ್ನು ನಾಗರಾಜ್ ಕೆ. ಎಂಬಾತನು ಬಾಡಿಗೆ ಪಡೆದುಕೊಂಡು, ಅದರಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಪಟಾಕಿಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಅ.೧೨ ರಂದು ಸಂಜೆ ೦೬:೦೦ ಗಂಟೆಗೆ ಮಾಹಿತಿ ಬಂದ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. ೧೪೩/೨೦೨೩ ಕಲಂ ೨೮೬, ೩೩೬ ಐ.ಪಿ.ಸಿ, ಮತ್ತು ೯(ಬಿ) ಸ್ಫೋಟಕ ಕಾಯ್ದೆ ೧೮೮೪ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಸಿಂಧನೂರು ರವರು ಸಿ.ಪಿ.ಐ. ಸಿಂಧನೂರು ಗ್ರಾಮೀಣ ವೃತ್ತ, ಪಿ.ಎಸ್.ಐ. ತುರ್ವಿಹಾಳ, ಸಿಬ್ಬಂದಿಯವರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ದಾಳಿ ಮಾಡಿ, ಪಾಟಾಕಿಗಳನ್ನು ದಾಸ್ತಾನು ಮಾಡಿದ ನಾಗರಾಜ್ ಕೆ. ಈತನನ್ನು ವಶಕ್ಕೆ ಪಡೆದು ಆತನು ದಾಸ್ತಾನು ಮಾಡಿದ ೧,೧೪೧ ಕೆ.ಜಿ. ೬೭೦ ಗ್ರಾಂಗಳು ತೂಕದ ಅಂಕಿ, ರೂ ೨೪,೪೦,೦೪೩/- ಬೆಲೆ ಬಾಳುವ ಪಟಾಕಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ.
ಅದೇ ರೀತಿ ರಾಯಚೂರು ನಗರದ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೇಸ್ತವಾರ ಪೇಟೆ ಏರಿಯಾದಲ್ಲಿರುವ ಗೀತಾ ಮಂದಿರ ಹತ್ತಿರದ ಮನೆಯಲ್ಲಿ ಪಿ. ರಮೇಶ ತಂದೆ ಪಿ.ಜೇಬಣ್ಣ ಈತನು ಪಟಾಕಿಗಳನ್ನು ಆಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ. ೧೩೦/೨೦೨೩ ಕಲಂ ೨೮೬, ೩೩೬ ಐ.ಪಿ.ಸಿ, ಮತ್ತು ೯(ಬಿ) ಸ್ಫೋಟಕ ಕಾಯ್ದೆ ೧೮೮೪ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪಿ.ಐ. ಸದರ್ ಬಜಾರ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಅಕ್ರಮವಾಗಿ ದಾಸ್ತಾನು ಮಾಡಿದ ಪಿ. ರಮೇಶ ತಂದೆ ಪಿ.ಜೇಬಣ್ಣ ಇವರನ್ನು ವಶಕ್ಕೆ ಪಡೆದು, ಆತನು ಆಕ್ರಮವಾಗಿ ದಾಸ್ತಾನು ಮಾಡಿದ ೩೦ ಕೆ.ಜಿ. ಅಂ.ಕಿ. ರೂ ೫೦,೦೦೦/- ಬೆಲೆ ಬಾಳುವ ವಿವಿಧ ಬಗೆಯ ಪಟಾಕಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚಿ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ. ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.