ರಾಯಚೂರು, ಜುಲೈ 16. ಸಿಂಧನೂರು ತಾಲೂಕಿನ ಗಡಿಗ್ರಾಮ ಬುಕ್ಕನಹಟ್ಟಿಗೆ ಸಾರಿಗೆ ಬಸ್ ಸಂಚಾರ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ವಿದ್ಯಾರ್ಥಿಗಳೊಂದಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸ್ಥಳೀಯ ಘಟಕ ವ್ಯವಸ್ಥಾಪಕ ಹೊನ್ನಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಬುಕ್ಕನಹಟ್ಟಿ ಮಾರ್ಗದಲ್ಲಿ ಬಸ್ ಓಡಿಸಿ ಮಂಜುನಾಥ ಗಾಣಗೇರ
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಮಾತನಾಡಿ, “ಸಿಂಧನೂರು ತಾಲೂಕಿನ ಬುಕ್ಕನಹಟ್ಟಿ ಗ್ರಾಮವು ತಾಲೂಕು ಕೇಂದ್ರದಿAದ 30 ಕಿ.ಮೀ ಅಂತರದಲ್ಲಿದ್ದು, ಗಡಿ ಗ್ರಾಮವಾಗಿದೆ. ಇಲ್ಲಿಗೆ ಸಾರಿಗೆ ಬಸ್ ಸಂಚಾರ ಸೌಕರ್ಯ ಇರುವುದಿಲ್ಲ. ಇದರಿಂದಾಗಿ ಶಾಲಾ-ಕಾಲೇಜಿಗೆ ಹೋಗುವ 50 ರಿಂದ 60 ವಿದ್ಯಾರ್ಥಿಗಳು ದಿನವೂ ಬೆಳಿಗ್ಗೆ ಬುಕ್ಕನಹಟ್ಟಿಯಿಂದ 2 ಕಿ.ಮೀ ಅಂತರದಲ್ಲಿರುವ ಉಮಲೂಟಿಗೆ ನಡೆದುಕೊಂಡು ಬಂದು, ಅಲ್ಲಿಂದ ಸಿಂಧನೂರು ನಗರಕ್ಕೆ ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಈ ವಿದ್ಯಾರ್ಥಿಗಳು ಅನಿವಾರ್ಯವಾಗಿ ಶಾಲಾ-ಕಾಲೇಜಿಗೆ ಗೈರಾಗುವಂತಾಗಿದೆ. ಇದು ಇವರ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಹಾಗಾಗಿ ಕೂಡಲೇ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಆಸ್ಪತ್ರೆಗೆ ಹೋಗಲು ಬಸ್ ಇಲ್ಲದಂತಾಗಿದೆ ಅಯ್ಯಪ್ಪ ಮೇಟಿ
ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ ಮಾತನಾಡಿ, ಗ್ರಾಮದಿಂದ ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವವರು, ಗರ್ಭಿಣಿಯರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬಸ್ ಸಂಚಾರ ಸೌಲಭ್ಯ ಇತ್ತು. ಆದರೆ ನಂತರ ವಿನಾಃಕಾರಣ ಸ್ಥಗಿತಗೊಳಿಸಲಾಗಿದ್ದು, ಗ್ರಾಮಸ್ಥರು ಪಟ್ಟಣ, ನಗರಗಳಿಗೆ ಹೋಗಲು ತೊಂದರೆಯಾಗಿದೆ. ಸಾರಿಗೆ ಬಸ್ ಸಂಚಾರ ಸೌಕರ್ಯ ಕಲ್ಪಿಸುವಂತೆ ಈಗಾಗಲೇ ಹಲವು ಬಾರಿ ಮನವಿ ಮಾಡಿದಾಗ್ಯೂ ಬಸ್ ಸಂಚಾರ ಆರಂಭಿಸಿರುವುದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ, ಗ್ರಾಮಸ್ಥರ/ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೂಡಲೇ ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.