ಮಸ್ಕಿ: ಪಟ್ಟಣದಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಂಡಿರುವ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಡಿವೈಡರ್,ಸರ್ವಿಸ್ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಮೂರು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಸೂಚಿಸಿದರು.
ಸಿಂಧನೂರಿನ ಸರ್ಕೀಟ್ ಹೌಸ್ನಲ್ಲಿ ಹೆದ್ದಾರಿ ಪ್ರಾಧಿಕಾರ,ಪುರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ ಅವರು ಕಾಮಗಾರಿ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿ ಕಾಮಗಾರಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಿ ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಹೆದ್ದಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದರು.
ಒತ್ತುವರಿ ತೆರವು ವಿಳಂಬದಿಂದ ಕಾಮಗಾರಿಗೆ ಹಾಗೂ ವಿದ್ಯುತ್ ಕಂಬ ಅಳವಡಿಸಲು ಅಡ್ಡಿಯಾಗಿದೆ.ಆದ್ದರಿಂದ ಎಷ್ಟು ಬೇಗ ತೆರವು ಮಾಡಿಕೊಡುತ್ತಾರೋ ಅಷ್ಟು ಬೇಗ ಕಾಮಗಾರಿ ಮುಗಿಯುತ್ತದೆ ಎಂದು ಹೆದ್ದಾರಿ ಪ್ರಾಧಿಕಾರಿದ ಎಇಇ ಭೀಮನಗೌಡ ಬಿರಾದಾರ ಶಾಸಕರಿಗೆ ತಿಳಿಸಿದರು.
ನ್ಯಾಯಾಲಯದಲ್ಲಿರುವ ತಡೆಯಾಜ್ಞೆಯನ್ನು ಹೆದ್ದಾರಿ ಹಾಗೂ ಪುರಸಭೆ ಅಧಿಕಾರಿಗಳು ಬಗೆಹರಿಸಿ ಕಾಮಗಾರಿ ಆರಂಭಿಸಲು ಅನುಕೂಲ ಮಾಡಬೇಕು.ಎರಡು ಕಡೆಯ ಸರ್ವಿಸ್ ರಸ್ತೆಯ ಒತ್ತುವರಿ ತೆರವುಗೊಳಿಸಿ ವಿದ್ಯುತ್ ಕಂಬ ಹಾಗೂ ಟಿಸಿಗಳನ್ನು ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜೆಸ್ಕಾಂ ವೆಂಕಟೇಶ,ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಡಿ.ಎಂ.ಮೇಲಿನಮನಿ,ಗೋಪಾಲ,ಅಮ್ಮಾಪೂರ ಕಂಪನಿ ಎಂಜಿನಿಯರ್ ಜಂಗಮೇಶ ಹಿರೇಮಠ,ಮಸ್ಕಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು,ಮೈಬೂಸಾಬ ಗ್ಯಾರಂಟಿ ಸಮಿತಿ ಅಧ್ಯಕ್ಷ ಮುದ್ದಾಪೂರು,ಹುಲಗಪ್ಪ ಉಪ್ಪಲದೊಡ್ಡಿ ಇದ್ದರು.
ವರದಿ : ಎಚ್.ಕೆ.ಬಡಿಗೇರ್