ಎಪ್ರಿಲ್ 08. ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಶ್ರೀ ಎಡೆಯೂರ ಸಿದ್ದಲಿಂಗೇಶ್ವರ ಅವರ 30ನೇ ವರ್ಷದ ಪುರಾಣ ಮಹೋತ್ಸವದ ಮಹಾಮಂಗಲ ಕಾರ್ಯಕ್ರಮದಲ್ಲಿ ಕೋಲಾಟ ಮತ್ತು ಕುಂಬಗಳನ್ನು ಹೊತ್ತುತಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೂವಿನ ಸಸಿಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಯಿತು.
ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ಕೂಡ ಈಶ್ವರ ದೇವಸ್ಥಾನದಲ್ಲಿ ಮಹಾಶಿವಶರಣ,ಮಹಾತಪಸ್ವಿ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರ ಪುರಾಣವನ್ನು 15ದಿನಗಳಕಾಲ ಹಮ್ಮಿಕೊಳ್ಳಲಾಗಿತ್ತು. ಈ ಪುರಾಣ ಮಹಾಮಂಗಲ ಕಾರ್ಯಕ್ರಮ ನೆರವೇರಿತು. ಇಂದು ಬೆಳಗ್ಗೆ ಭಕ್ತರಿಂದ ಈಶ್ವರ ದೇವರ ಮೂರ್ತಿಗೆ ಕ್ಷೀರ ಅಭಿಷೇಕ,ಪುಷ್ಪಾಲಂಕಾರ ಹಾಗೂ ದೇವರಿಗೆ ನೈವೇದ್ಯ ಮಾಡಲಾಯಿತು.ನಂತರ ಮಹಿಳೆಯರ ಕುಂಭ ಕಳಸಗಳನ್ನು ಹೊತ್ತು ಡೊಳ್ಳು ವಾದ್ಯಗಳು,ಕೋಲಾಟ ಹಾಗೂ ವಿವಿಧ ನೃತ್ಯ ಕಲೆಗಳ ಮೂಲಕ ಮನೆ ಮನೆಯ ಸಂಭ್ರಮಾಚರಣೆಗಳ ಮೂಲಕ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ನೇತೃತ್ವದಲ್ಲಿ ವಿವಿಧ ಕಲಾವಿದರು ಹಾಗೂ ನೃತ್ಯ,ಕೋಲಾಟ ಕಲಾವಿದರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿ ಪರಿಸರ ಜಾಗೃತಿ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಾಪೂರ ಗ್ರಾಮದ ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.