ಜಿಲ್ಲಾಡಳಿತದಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಯೋಗ
ರಾಯಚೂರು,ಜೂ.೨೧, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಆಶ್ರಯದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಮಹ್ಮಾತ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ದಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಮೂಹಿಕ ಯೋಗ ಮಾಡಿದರು.
ಈ ಬಾರಿ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎನ್ನುವ ಘೋಷ ವಾಕ್ಯದೊಂದಿಗೆ ೧೦ನೇ ಅಂತರಾಷ್ಟ್ರೀಯ ಯೋಗ ದಿನಚರಣೆಯನ್ನು ಆಚರಿಸಲಾಯಿತು. ಅಪಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ನಿಖಿಲ್ ಬಿ. ಅವರು ಮಾತನಾಡಿ, ನಿತ್ಯ ನಾವು ಯೋಗಾಭ್ಯಾಸ ಮಾಡುವುದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯೋಗ ಸಹಕಾರಿಯಾಗಿದೆ. ಇದರಿಂದ ಆತ್ಮ ಸದೃಢ ಹೆಚ್ಚಲಿದೆ. ಜತೆಗೆ ತಾಳ್ಮೆ ಬೆಳೆಸಿಕೊಳ್ಳಲು ಯೋಗ ಅನುಕೂಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.
ದೈಹಿಕ ಆರೋಗ್ಯವನ್ನು ಮೀರಿ, ಯೋಗವು ಮಾನಸಿಕ ಯೋಗಕ್ಷೇಮಕ್ಕೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ. ಪ್ರಾಣಾಯಾಮ ಮತ್ತು ಧ್ಯಾನದಂತಹ ಅಭ್ಯಾಸಗಳು ಆತಂಕ ಮತ್ತು ಖಿನ್ನತೆಯನ್ನು ನಿರ್ವಹಿಸಲು ನಿರ್ಣಾಯಕವಾಗಿವೆ. ಎಲ್ಲ ಮಹಿಳೆಯರು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಬೇಕೆಂದರು.
ಇದೇ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಮಾತನಾಡಿ, ಯೋಗ ವ್ಯಕ್ತಿಯ ದೈಹಿಕ ವಿಕಾಸಕ್ಕೆ ಮಹತ್ವದ ಕೊಡಿಗೆಯನ್ನು ನೀಡುತ್ತದೆ. ಯೋಗದಿಂದ ನೆಮ್ಮದಿ ಶಾಂತಿ ಚೈತನ್ಯ ಮತ್ತು ಆರೋಗ್ಯವು ಸದೃಢಗೊಳ್ಳುತ್ತದೆ ಎಂದರು.
೪೫ ನಿಮಿಷಗಳ ಕಾಲ ವಿವಿಧ ಆಸನ: ನಗರದ ಮಹ್ಮಾತ ಗಾಂಧಿ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಕ್ಷಕರಿಂದ ವಿವಿಧ ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಗಣ್ಯರು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸುಮಾರು ೪೫ ನಿಮಿಷಗಳ ಕಾಲ ವಿವಿಧ ಆಸನಗಳಾದ ವೃಕ್ಷಾಸನ, ಪಾದಹಸ್ತಾಸನ, ತಾಡಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟಾçಸನ, ಅರ್ಧ ಉಷ್ಟಾçಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಅಭ್ಯಾಸ ಸೇರಿದಂತೆ ವಿವಿಧ ಯೋಗಸನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಂದ್ರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ ಬಡಿಗೇರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣ , ರಾಯಚೂರು ನಗರಸಭೆಯ ಆಯುಕ್ತ ಗುರುಸಿದ್ದಯ್ಯ ಹಿರೇಮಠ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ರಾಜಶೇಖರ ರಾಮಸ್ವಾಮಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಸ್ಮಿತಾ ಅಕ್ಕೊರು, ಯೋಗ ಶಿಕ್ಷಕ ಡಾ.ತಿಮ್ಮಪ್ಪ ವಡ್ಡಿಪಲ್ಲಿ, ಯೋಗ ನ್ಯಾಚೋರೋಪತಿ ವೈದ್ಯಾಧಿಕಾರಿ ಡಾ.ಪೂಜಾ ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರು ಮತ್ತು ವಿವಿಧ ಯೋಗ ಸಂಸ್ಥೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.