ರಾಯಚೂರು,ಸೆ.೦೫ ದೇಶವು ಸುಸಂಸ್ಕೃತವಾಗಿ ಅಭಿವೃದ್ಧಿ ಹೊಂದಲು ಮತ್ತು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲು ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದದ್ದು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು.
ಅವರು ಸೆ.೫ರ(ಮಂಗಳವಾರ) ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ನೇ ಜನ್ಮದಿನೋತ್ಸವದಂಗವಾಗಿ ರಾಯಚೂರು ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ಮಿಗಿಲಾದ ದೇವರೆಂದರೇ ಅದು ಶಿಕ್ಷಕರು ಮಾತ್ರ ದೇಶದಲ್ಲಿ ಶಿಕ್ಷಕರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳದರೂ ಶಿಕ್ಷಣ ನೀಡಿದ ಗುರುಗಳನ್ನು ಗೌರವದಿಂದ ಕಾಣಬೇಕು ಎಂದರು.
ತAದೆ, ತಾಯಿ ಮಗುವಿಗೆ ಜೀವನದ ಪಾಠಗಳನ್ನು ಕಲಿಸುತ್ತಾರೆ ಅದರಂತೆ ಶಿಕ್ಷಕರು ಶಿಕ್ಷಣದ ಜೊತೆಗೆ ಸಂಸ್ಕಾರ, ವಿನಯ, ಹಾಗೂ ಜೀವನದಲ್ಲಿ ಯಶಸ್ಸನ್ನು ಕಾಣುವ ಮಾರ್ಗವನ್ನು ಹಾಕಿಕೊಡುತ್ತಾರೆ. ಜೊತೆಗೆ ಶಿಕ್ಷಣದಿಂದ ಮಕ್ಕಳ ವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಾರೆ ಎಂದರು.
ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಿ ಶೈಕ್ಷಣಿಕ ಸೇವೆ ಸಲ್ಲಿಸುವ ಶಿಕ್ಷಕರಿಗೆ ಸಾಕಷ್ಟು ತೊಂದರೆಗಳಾಗುತ್ತಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಸಕಾರದ ಮಟ್ಟದಲ್ಲಿ ಚರ್ಚಿಸಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಗುರು ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕರು ಮಕ್ಕಳನ್ನು ದಿಟ್ಟಿಸಿ ನೋಡುವ ಹಾಗೂ ಇಲ್ಲ ಮಕ್ಕಳಿಗೆ ಯಾವುದೇ ಬುದ್ದಿ ಮಾತುಗಳನ್ನು ಹೇಳುವ ಹಾಗಿಲ್ಲ ಇದರಿಂದ ಮಕ್ಕಳ ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದರು.
ಸವಾಲುಗಳ ಮಧ್ಯೆ ಜವಾಬ್ದಾರಿಯುತವಾಗಿ ಶಿಕ್ಷಕರು ಕಾರ್ಯನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಅತ್ಯಂತ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಯಾದಗಿರಿಯ ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ವೆಂಕಟರಾವ್ ಕುಲಕರ್ಣಿ ಅವರು ಉಪನ್ಯಾಸ ನೀಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರಾಮಾಣಿಕ, ಶ್ರದ್ಧೆ ನಿಷ್ಠಿಯಿಂದ ಮತ್ತು ಶಾಂತಿಯುತವಾಗಿ ಮಾಡಿದ್ದಲ್ಲಿ ಸಮೃದ್ಧ ದೇಶವನ್ನು ನಿರ್ಮಾಣ ಮಾಡಬಹುದಾಗಿದೆ. ದೇಶದ ಪ್ರತಿಯೊಂದು ವಿಷಯದಲ್ಲೂ ಜ್ಞಾನ ಅಡಗಿದ್ದು, ಅದನ್ನು ಹೆಕ್ಕಿ ತೆಗೆಯುವ ಕೆಲಸಗಳಾಗಬೇಕಾಗಿದೆ ಎಂದರು.
ಶಿಕ್ಷಕರು ನೀಡುವ ಪ್ರತಿಯೊಂದು ಪಾಠ ಪ್ರವಚನಗಳು ಭೂಮಿಗೆ ಬಿದ್ದ ಬೀಜದಂತೆ ಆ ಬೀಜವು ಬೆಳೆದು ಉತ್ತಮ ಹೆಮ್ಮರವಾಗುವುದನ್ನು ಕಂಡಾಗ ಶಿಕ್ಷಕರ ಸೇವೆಗೆ ಸಾರ್ಥಕ ಸಿಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಇಂದಿರಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ಡಯಟ್ ಅಧಿಕಾರಿ ಮಲ್ಲಿಕಾರ್ಜುನ, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಮಾನವಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರು: ದೇವದುರ್ಗ ತಾಲೂಕಿನ ಗುಡೇಲರದೊಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುಸ್ವಾಮಿ, ಲಿಂಗಸುಗೂರಿನ ಬಗಡಿ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯ ವಿಷ್ಣುಕುಮಾರ ಚೆಳ್ಳಿಗೇರಿ, ಮಾನವಿ ತಾಲೂಕಿನ ಮುಚ್ಳಗುಡ್ಡ ಕ್ಯಾಂಪ್ನ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಮೇಶ ಭಂಡಾರಿ, ರಾಯಚೂರು ತಾಲೂಕಿನ ಸೀತನಗರ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾವತಿ ದೇಸಾಯಿ, ಸಿಂಧನೂರು ತಾಲೂಕಿನ ಎಪಿಎಂಸಿ ಯಾರ್ಡ್ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭೀರಪ್ಪ, ದೇವದುರ್ಗ ತಾಲೂಕಿನ ಕೆಇಬಿ ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಬಮ್ಮ, ಲಿಂಗಸುಗೂರು ತಲೂಕಿನ ಶೀಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈರಣ್ಣ(ವೀರೇಶ), ಮಾನವಿ ತಾಲೂಕಿನ ಕೋನಾಪುರ ಪೇಟೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮೂಕಪ್ಪ ಕಟ್ಟಿಮನಿ, ರಾಯಚೂರ ತಾಲೂಕಿನ ಇಡಪನೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಓದಿ ಸೋಮರ ಚನ್ನಬಸಯ್ಯ, ಸಿಂಧನೂರು ತಾಲೂಕಿನ ದಢೇಸುಗೂರು ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಮುತ್ತಕ್ಕ, ಅರಕೇರಾ ಬಾಲಕೀಯರ ಪ್ರೌಢ ಶಾಲೆಯ ಶಿಕ್ಷಕ ಶಾಮೀದ ಅಲಿ, ಲಿಂಗಸುಗೂರು ಅಮರೇಶ್ವರ ಬಾಲಕೀಯರ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಗಂಗಮ್ಮ, ಮಾನವಿ ಬಾಲಕರ ಪ್ರೌಢ ಶಾಲೆಯ ಶಿಕ್ಷಕ ಮಹಿಬೂಬ ಪಾಷಾ, ದಿನ್ನಿ ಆರ್.ಎಂಎಸ್.ಎ ಪ್ರೌಢ ಶಾಲೆಯ ಶಿಕ್ಷಕಿ ರಶ್ಮಿ, ತುರ್ವಿಹಾಳ ಪ್ರೌಢ ಶಾಲೆಯ ಶಿಕ್ಷಕ ಬಸವರಾಜ, ಹಾಗೂ ಗೋನವಾಟ್ಲಿ ತಾಂಡಾದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈಶ್ವರಪ್ಪ.
ರಾಯಚೂರು ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರು: ಕೆರೆಬೂದುರು ಶಾಲೆಯ ಸಾವಿತ್ರಿ, ಮಲಿಯಾಬಾದ್ ಶಾಲೆಯ ತಿರುಮಲಮ್ಮ, ಪೊಲೀಸ್ ಕಾಲೋನಿ ಶಾಲೆಯ ಸೀತಾ, ಕೆ.ಇ.ಬಿ ಶಾಲೆಯ ಕೃಷ್ಣಾ ಬಾಯಿ, ಪೂರ್ತಿಪ್ಲಿ ಶಾಲೆಯ ಪ್ರಭಾವತಿ, ಜಾಲಿಬೆಂಚಿ ಶಾಲೆಯ ಕಾಳಪ್ಪ ಪತ್ತಾರ, ಮಟಮಾರಿ ಶಾಲೆಯ ವಿನಯ್ಕುಮಾರ್, ಅಂಬೇಡ್ಕರ್ ನಗರದ ಶಾಲೆಯ ಶಾಂತಮೂರ್ತಿ, ಅಸ್ಕಿಹಾಳ ಪ್ರೌಢ ಶಾಲೆಯ ನಿರ್ಮಲಾ ಭಂಡಾರಿ, ಜೇಗರಕಲ್ ಪ್ರೌಢ ಶಾಲೆಯ ಶೋಭಾ ಉಪಾಸಿ, ಬಾಲಕರ ಪ್ರೌಢ ಶಾಲೆಯ ವಿಜಯಲಕ್ಷ್ಮಿ ಆತ್ಕೂರು ಪ್ರೌಢ ಶಾಲೆಯ ರಾಜು ಚೌಹಾಣ, ಬಿಜನಗೇರಾ ಪ್ರೌಢ ಶಾಲೆಯ ಬಸವರಾಜ್, ಮಡ್ಡಿಪೇಟೆ ಪ್ರೌಢ ಶಾಲೆಯ ಅಜೀಮ್ ಸಾಬ್, ಸಿಯಾತಲಾಬ್ ಪ್ರೌಢ ಶಾಲೆಯ ಸೈಯದ್ ಇಸ್ಮಾಯಿಲ್ ಖಾದ್ರಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.