ರಾಯಚೂರು ಜುಲೈ 18. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜುಲೈ 18ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ರಸಗೊಬ್ಬರ ವಿತರಣೆ ವಿಷಯವು ಚರ್ಚೆಗೆ ಬಂದಿತು.
ರಾಯಚೂರ ಜಿಲ್ಲೆಯಲ್ಲಿ ಕಾಪು ದಾಸ್ತಾನು 6027 ಮೆಟ್ರಿಕ್ ಟನ್ ಪೈಕಿ 2527.48 ಮೆಟ್ರಿಕ್ ಟನ್ ಲಭ್ಯವಿದ್ದು, ರಿಟೆಲ್ ಮಾರಾಟಗಾರಲ್ಲಿ 57,763 ಮೆ ಟನ್ ರಸಗೊಬ್ಬರ ಲಭ್ಯವಿರುತ್ತದೆ. ಜಿಲ್ಲೆಗೆ 1,50,000 ಮೆಟ್ರಿಕ್ ಟನ್ ಬೇಡಿಕೆ ಪೈಕಿ ಇದುವರೆಗೆ 1.45,000 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಪ್ರಕಾಶ್ ಚವ್ಹಾಣ್ ಅವರು ಸಭೆಗೆ ಮಾಹಿತಿ ನೀಡಿದರು.
ಶಾಸಕರಿಂದ ಅಸಮಾಧಾನ: ರೈತರಿಗೆ ಗೊಬ್ಬರು ಸರಿಯಾಗಿ ತಲುಪುತ್ತಿಲ್ಲ. ಯಾರಿಗೆ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರುವಿಹಾಳ ಅವರು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರ ಅಸಮಾಧಾನಕ್ಕೆ ಧನಿಗೂಡಿಸಿದ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ ನಾಯಕ ಹಾಗೂ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರು ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಪರದಾಡುತ್ತಿದ್ದಾರೆ ಎಂದರು. ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಗೆ ಸರಿಯಾದ ವ್ಯವಸ್ಥೆಯಾಗಬೇಕು ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ರುದ್ರಾಗೌಡ ಮಹಾಂತಗೌಡ ಹಾಗೂ ಸೋಮಶೇಖರ ಪಾಟೀಲ ಅವರು ಸಲಹೆ ಮಾಡಿದರು.
ಅಧಿಕಾರಿಗಳಿಗೆ ಸೂಚನೆ: ಶಾಸಕರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಹಕಾರಿ ಸಂಘಗಳು ಮತ್ತು ಖಾಸಗಿ ಮಳಿಗೆಗಳಲ್ಲಿ ಗೊಬ್ಬರ ದಾಸ್ತಾನು ಇರುವ ಬಗ್ಗೆ ಪ್ರತಿದಿನ ಫಲಕದ ಮೂಲಕ ಮಾಹಿತಿ ನೀಡಬೇಕು. ಸರಿಯಾಗಿ ಮಾಹಿತಿ ನೀಡದ ಖಾಸಗಿ ಮಾರಾಟಗಾರರನ್ನು ಬ್ಲಾಕ್ ಲೀಸ್ಟಗೆ ಸೇರ್ಪಡೆ ಮಾಡಬೇಕು ಎಂದು ಸಚಿವರು, ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಸಹ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಗೊಬ್ಬರ ಪೂರೈಕೆ ಆಗಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕೃಷಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು. ರಸಗೊಬ್ಬರದ ಕೊರತೆ ಇರುವ ಬಗ್ಗೆ ತಿಳಿಸಿದಲ್ಲಿ ತಾವು ಕೃಷಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಹೇಳಿದರು.
ಶೇ.32ರಷ್ಟು ಮಳೆ ಕೊರತೆ: ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಶೇ.69ರಷ್ಟು ಹೆಚ್ಚಿನ ಮಳೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಶೇ.32ರಷ್ಟು ಮಳೆ ಕೊರತೆಯಿಂದ ತೊಗರಿ ಮತ್ತು ಹತ್ತಿ ಬೆಳೆಗಳು ನಲುಗುತ್ತಿವೆ. ಜಿಲ್ಲೆಯಲ್ಲಿ 5.53 ಲಕ್ಷ ಹೆಕ್ಟೇರನಲ್ಲಿ ಬಿತ್ತನೆ ಗುರಿ ಪೈಕಿ ಇದುವರೆಗೆ ಶೇ.48 ಹೇಕ್ಟೇರ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದುವರೆಗೆ 37 ರೈತ ಸಂಪರ್ಕ ಕೇಂದ್ರಗಳಿAದ 4856.23 ಕ್ವಿಂಟಲ್ ನಷ್ಟುವ ಭತ್ತ, ತೊಗರಿ, ಸಜ್ಜೆ, ಹೆಸರು, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜ ದಾಸ್ತಾನು ಮಾಡಿ ಇದುವರೆಗೆ ರಿಯಾಯಿತಿ ದರದಲ್ಲಿ 3245.21 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ತನಿಖೆಗೆ ಸೂಚನೆ: ಬೇರೆ ಬೇರೆ ತಾಲೂಕುಗಳಲ್ಲಿ ಜಲಧಾರೆ ಯೋಜನೆಯ ಕಾಮಗಾರಿಯು ಕಳಪೆಯಾಗಿದೆ ಎಂದು ಶಾಸಕರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರು ದೂರಿದ ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜಲಧಾರೆ ಕಾಮಗಾರಿ ಕಳಪೆಯ ಬಗ್ಗೆ ಮಸ್ಕಿ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿ ಕಾಮಗಾರಿ ಕಳಪೆ ಎಂದು ಕಂಡುಬAದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಶಿಕ್ಷೆಗೆ ಗುರಿಪಡಿಸಲು ವಾರದೊಳಗೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ತಿಳಿಸಿದರು.
ಪಿಡಿಓ ಕೊರತೆ ತಪ್ಪಿಸಿ
ರಾಯಚೂರ ಜಿಲ್ಲೆಯ ಬೇರೆಡೆ ಹಾಕದೇ ದೇವದುರ್ಗ ತಾಲೂಕಿನಲ್ಲಿ ಮಾತ್ರ 40 ಕೀ.ಮಿದೊಳಗೆ ಎರಡು ಟೋಲ್ ಅಳವಡಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಅನ್ಯಾಯ ಸರಿಪಡಿಸಲೇಬೇಕು. ಇದನ್ನು ಈ ಕೂಡಲೇ ತಾತ್ಕಾಲಿಕವಾಗಿ ರದ್ದುಪಡಿಸಿ ಎಂದು ಶಾಸಕರಾದ ಕರೆಮ್ಮ ಜಿ ನಾಯಕ ಅವರು ಸಭೆಯಲ್ಲಿ ಪಟ್ಟುಹಿಡಿದರು. 33 ಪಂಚಾಯಿತಿಗಳಿಗೆ ಕೇವಲ 6 ಜನ ಮಾತ್ರ ಪಿಡಿಓ ಇದ್ದಾರೆ. ಎಲ್ಲ ಪಂಚಾಯಿತಿಗಳಿಗೆ ಪಿಡಿಓ ನೇಮಕಾತಿಯಾಗಬೇಕು ಎಂದು ಶಾಸಕರು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಲೋಕೋಪಯೋಗಿ ಸಚಿವರೊಂದಿಗೆ ತಾವು ಮಾತನಾಡಲಿದ್ದು, ಸದ್ಯಕ್ಕೆ ಟೋಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಗಜಾನನ ಬಾಳೆ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಶಫಿವುಲ್ಲಾಖಾನ್ ಮೆಹಬೂಬ, ತಿಮ್ಮಪ್ಪ ಮಲ್ಲಯ್ಯ, ಮೀನಾಕ್ಷಿ ರಾಮಸ್ವಾಮಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣಬಸವರಾಜ, ಸಿಪಿಓ ಡಾ.ಟಿ.ರೋಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.