ಬಡವರ ಬಾರುಕೋಲು ಸುದ್ದಿ
ಮಸ್ಕಿ : ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಸುಮಾರು ರೂ.10 ಕೋಟಿ ವೆಚ್ಚದಲ್ಲಿ ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಡಿವೈಡರ್,ಚರಂಡಿ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ.
ಆದರೆ ರಸ್ತೆ ನಿರ್ಮಿಸಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಪುರಸಭೆ ಅಧಿಕಾರಿಗಳು ಮಸ್ಕಿಯಲ್ಲಿನ ಧೂಳಿಗೆ ಕಣ್ಮುಚ್ಚಿ ಕುಳಿತ ಹಾಗೆ ಕಾಣುತ್ತದೆ.
ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಧೂಳಿನ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ ವಿನಃ ತಗ್ಗುತ್ತಿಲ್ಲ.ಈ ಧೂಳು ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಏನಾದರೂ ಪರಿಹಾರ ಕಂಡುಕೊಳ್ಳದೇ ಕಾಲಹರಣ ಮಾಡುತ್ತಾ ಮಸ್ಕಿ ನಾಗರಿಕರನ್ನು ಧೂಳಿನಲ್ಲಿಯೇ ಬದುಕುವ ಹಾಗೆ ಮಾಡಿ,ರೋಗದ ಮಡುವಿಗೆ ಬೀಳುವಂತೆ ಮಾಡುತ್ತಿದ್ದಾರೆ.
ಧೂಳು ಮಯವಾದ ರಸ್ತೆಗಳು :-
ಸ್ಥಳೀಯ ಹಳೆಯ ಬಸ್ ನಿಲ್ದಾಣದ ಮುಖ್ಯ ರಸ್ತೆ,ಸಿಂಧನೂರು ಮಾರ್ಗದ ರಸ್ತೆ ಹಾಗೂ ಲಿಂಗಸಗೂರುಗೆ ತೆರಳುವ ಮಾರ್ಗದ ರಸ್ತೆ ಅಷ್ಟೇ ಅಲ್ಲದೆ ಒಳ ರಸ್ತೆಗಳಾದ ಮುದಗಲ್ ಮಾರ್ಗ,ಹಳೇಬಜಾರ್ ರಸ್ತೆ, ಪುರಸಭೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಧೂಳು ಮಯವಾಗಿವೆ.
ವ್ಯಾಪಾರಿಗಳಿಗೆ ಸಂಕಟ :-
ರಸ್ತೆ ಬದಿಯಲ್ಲಿನ ಸಣ್ಣ-ಪುಟ್ಟ ವ್ಯಾಪಾರಿಗಳು,ಅಂಗಡಿ-ಹೋಟೆಲ್ ಮಾಲೀಕರು ಧೂಳಿನ ಪ್ರಮಾಣಕ್ಕೆ ತತ್ತರಿಸಿದ್ದಾರೆ.ಕಾಯಿಪಲ್ಲೆ ವ್ಯಾಪಾರಿಗಳು,ಹಣ್ಣು ವ್ಯಾಪಾರಿಗಳು ಬೀದಿ ಬದಿ ವ್ಯಾಪಾರಕ್ಕೆ ನಿಂತರೇ ಧೂಳಿನಲ್ಲಿ ಸ್ನಾನ ಮಾಡಿದ ಅನುಭವವಾಗುತ್ತಿದೆ.
ಇನ್ನೂ ಮಾರಾಟಕ್ಕಿಟ್ಟ ಹಣ್ಣು,ಕಾಯಿಪಲ್ಲೆಗಳು ಧೂಳು ಮಯವಾಗುತ್ತವೆ ಹಾಗೂ ತಾಸು,ಅರ್ಧತಾಸಿಗೊಮ್ಮೆ ಹಣ್ಣುಗಳನ್ನು ಬಟ್ಟೆಯಿಂದ ಒರೆಸಲಾಗುತ್ತಿದೆ.ಇನ್ನೂ ವಾಹನ ಸವಾರರಿಗೂ ಧೂಳು ನರಕ ಸೃಷ್ಟಿಸಿದೆ.ದ್ವಿಚಕ್ರ ವಾಹನ ಸವಾರರು,ಇತರ ನಾಲ್ಕು ಚಕ್ರಗಳ ವಾಹನಗಳ ಸವಾರರು ಮುಖ ಮುಚ್ಚಿಕೊಂಡು ಗಾಡಿ ಸವಾರಿ ಮಾಡಬೇಕಿದೆ. ಪಾದಚಾರಿಗಳು ಧೂಳು ಸೇವಿಸಿ,ಆಡಳಿತದ ವಿರುದ್ಧ ಶಾಪ ಹಾಕುತ್ತಿದ್ದಾರೆ.
ರೋಗದ ಭೀತಿ :-
ನಿತ್ಯವೂ ಧೂಳಿನ ಪ್ರಮಾಣ ಹೆಚ್ಚಳವಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಕ್ರಮ ಕೆಗೊಳ್ಳುವಲ್ಲಿ ವಿಫಲವಾಗಿದ್ದಾರೆ.ಸುಮಾರು ತಿಂಗಳಿನಿಂದ ಆರಂಭವಾದ 10 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲಿಕರಣ,ಡಿವೈಡರ್ ಕೆಲಸದಿಂದ ಧೂಳು ನಿವಾರಣೆಯಾಗುತ್ತದೆ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ.
ಅಲ್ಲಿವರೆಗೂ ಆದರು ಕನಿಷ್ಠ ಪಕ್ಷ ಪುರಸಭೆಯಿಂದ ಬೆಳಗ್ಗೆ,ಸಂಜೆ ರಸ್ತೆಗೆ ನೀರು ಹೊಡೆಸುವ ಕೆಲಸವಾದರೂ ನಡೆಸುವುದಕ್ಕೆ ಚುನಾಯಿತರು ಆಸಕ್ತಿ ತೋರುತ್ತಿಲ್ಲ.
ಹೀಗಾಗಿ ರೋಗದ ಭೀತಿ ಹೆಚ್ಚಾಗಿದ್ದು,ಈಗಾಗಲೇ ನೂರಾರು ಮಂದಿ ಅಸ್ತಮಾ,ಟಿಬಿ ಅಂತಹ ಇತರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳೇ ಹೇಳುತ್ತಾರೆ.
ಮಸ್ಕಿ ಮಾಸ್ಕ್ ಮಯ :-
ಧೂಳಿನ ಆರ್ಭಟಕ್ಕೆ ಜನತೆಯೇ ನಲುಗಿದ್ದು,ಆಡಳಿತ ವರ್ಗ ಮಾತ್ರ ನಿವಾರಣೆಗೆ ಮನಸ್ಸು ಮಾಡುತ್ತಿಲ್ಲ.ಇದಕ್ಕೆ ಬೇಸತ್ತ ಕ್ಲಾಸ್-1 ವರ್ಗದ ಜನತೆ ಮಾಸ್ಕ್,ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದಾರೆ.ಇನ್ನೂ ಪ್ರಮುಖ ವೃತ್ತಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ಪೊಲೀಸರು,ವಾಹನಗಳ ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕೆ ಸಂಬಂಧಿಸಿದವರು ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸದೇ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.
ನೋಡಿದರು ನೋಡದೆ ಹಾಗೆ :-
ಇಲ್ಲಿನ ಧೂಳು,ನಿನ್ನೆ, ಮೊನ್ನೆಯದಲ್ಲ,ಸುಮಾರು ತಿಂಗಳಗಳಿಂದಲೂ ಇದ್ದು,ಈ ಬಾರಿ ಡಿವೈಡರ್ ಕಾಮಗಾರಿ ನಡೆಯುವತ್ತಿರುವುದರಿಂದ ಅತಿಹೆಚ್ಚು ಧೂಳು ಬರುತ್ತಿದ್ದು,ಅದರ ಜೊತೆಗೆ ಟ್ರಾಫಿಕ್ ಜಾಮ್ ಸಹ ಆಗುತ್ತಿದೆ ಇದರಿಂದ ತುರ್ತುಸ್ಥಿತಿ ನಿರ್ವಹಣೆ (ಅಂಬ್ಯುಲೇನ್ಸ್) ವಾಹನಗಳು ಟ್ರಾಫಿಕ್ ಜಾಮ್ ನಿಂದ ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ಇನ್ನೂ ಬೈಕ್ ಸವಾರರು ಲಾರಿ ಅಥವಾ ಬಸ್ಗಳ ಹಿಂದೆ ಹೊರಟರೆ ಮುಂದೆ ದಾರಿಯೂ ಕಾಣದಷ್ಟು ಧೂಳು ವ್ಯಾಪಿಸುತ್ತಿದ್ದರಿಂದ ಪಾದಚಾರಿಗಳಿಗೆ ಪ್ರಾಣ ಭಯ ಶುರುವಾಗಿದೆ,ಹೌದು ನಿನ್ನೆ ದಿನ ರವಿವಾರ ರಾತ್ರಿ 7 ಗಂಟೆಗೆ ಪಾದಚಾರಿಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯ ಸಾವು ಸಂಭವಿಸಿದೆ ಇದರಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಘಟನೆಗಳು ನಡೆದರು ಸುಧಾರಣೆ ಮಾಡುವವರು ಯಾರು ಸಹ ಈ ಕಡೆ ಗಮನ ಹರಿಸದೆ ನೋಡಿದರು ನೋಡದೆ ಹಾಗೆ ಕಾರ್ ಗಳಲ್ಲಿ ಕುಳಿತುಕೊಂಡು ಗ್ಲಾಸ್ ಗಳನ್ನು ಮುಚ್ಚಿಕೊಂಡು ತಿರುಗಾಡಿ ಹೋಗುತ್ತಾರೆ ವಿನಃ ಸುಧಾರಣೆಯ ಕಡೆಗೆ ಮಾತ್ರ ಗಮನಹರಿಸುತ್ತಿಲ್ಲ.
ಹೋರಾಟ ನಿಷ್ಕ್ರಿಯ ಯಾಕೆ ?
ಮಸ್ಕಿ ಸುಂದರವಾದ ನಗರ ನಿರ್ಮಾಣ ಮಾಡಲು ಮತ್ತು ನಗರದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಆಗಾಗ ಬೇಡಿಕೆ ಇಟ್ಟು ಬೀದಿಗಿಳಿಯುತ್ತಿದ್ದ ಸಂಘಟನೆಗಳೂ ಈ ಬಾರಿ ಮೌನವಹಿಸಿವೆ.ಹೋರಾಟದ ಕೂಗು ತಗ್ಗಿದ್ದು,ಸಂಘಟನೆಗಳೂ ನಿಷ್ಕ್ರಿಯವಾದಂತಿವೆ ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಹೇಳಿಕೆಗಳು ಕೇಳಿ ಬರುತ್ತೀವೆ.
ಏಕೆಂದರೆ ನಗರದಲ್ಲಿ ಏನಾದರು ಸಣ್ಣ-ಪುಟ್ಟ ಘಟನೆಗಳು ಜರುಗಿದರೆ ಮನವಿ,ಪ್ರತಿಭಟನೆ ಎಂದು ಬೀದಿಗಳಿಯುವ ಸಂಘಟಕರು ಧೂಳಿನ ಪ್ರಮಾಣಕ್ಕೆ ಸಾವಿರಾರು ಮಂದಿಯ ಆರೋಗ್ಯ ಹಾಳಾಗುತ್ತಿದ್ದರೂ ಮೌನವಹಿಸಿರುವುದು ವಿಷಾದದ ಸಂಗತಿ.