ಬಡವರ ಬಾರುಕೋಲು ಸುದ್ದಿ
ಮಸ್ಕಿ : ಶತಮಾನಗಳ ಕಾಲ ನೆರಳನ್ನು ನೀಡಿ,ಸಾವಿರಾರು ಪ್ರಯಾಣಿಕರಿಗೆ ತಂಗುದಾಣದಂತಿದ್ದ ಮರಗಳು ರಸ್ತೆ ವಿಸ್ತರಣೆಗಾಗಿ ಧರೆಗುರುಳಿದವು.
ಹಿಂದೆ ಪಟ್ಟಣದ ಹಳೆ ಬಸ್ ನಿಲ್ದಾಣದೊಳಗಿದ್ದ
ಮರಗಳು ಶತಮಾನಗಳ ಕಾಲದಿಂದ ಸಾವಿರಾರು
ಪ್ರಯಾಣಿಕರಿಗೆ ನೆರಳನ್ನು ನೀಡಿದ್ದವು.ಅನಾಥರಿಗೆ ಆಶ್ರಯವಾಗಿದ್ದ ಮರಗಳೇ ಇಲ್ಲದೆ ರಸ್ತೆಗಳು ಇಂದು ಅನಾಥವಾಗಿವೆ.
ಬಹು ವರ್ಷಗಳ ಹಿಂದೆ ಕೆಲವರು ಈ ಮರಗಳ ಕೆಳಗೆ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನವನ್ನೂ ನಡೆಸುತ್ತಿದ್ದರು.ಅದರಲ್ಲೂ ಸರ್ಕಾರಿ ಕಚೇರಿ,ಬ್ಯಾಂಕ್ಗಳಿಗೆ ಬಂದ ಹಿರಿಯರು,ಮಕ್ಕಳು,ಮಹಿಳೆಯರು,ಬೆಂಗಳೂರು ಕಡೆಗೆ ಹೋಗುವ ನೂರಾರು ಪ್ರಯಾಣಿಕರು ಬಸ್ನಿಲ್ದಾಣ ಬಳಿ ಇದ್ದ ಬೇವಿನ ಮರದ ಕೆಳಗೆ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು.
ಇಂದು ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾದ್ದರಿಂದ ರಸ್ತೆಗಳು ಬೋಳು ಬೋಳಾಗಿ ಕಾಣುತ್ತಿದೆ.
ಒಂದು ಮರ ಬೆಳೆಸಲು 8 ರಿಂದ 10 ವರ್ಷ ಕಾಯಬೇಕು.ಒಂದು ಮರ ಕಡಿದರೆ ಬೇರೆ ಜಾಗದಲ್ಲಿ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು.ಸರ್ಕಾರ ಗಿಡ ನೆಡಿ,ಪರಿಸರ ಉಳಿಸಿ,ಪರಿಸರವಿದ್ದರೆ ನಾಡಿಗೆ ಮಳೆ,ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ.ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ನಾಶಮಾಡಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತದೆ.
ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ. ಮರಗಳನ್ನು ಕಡಿದ ಪ್ರಮಾಣದಲ್ಲೇ ಪಟ್ಟಣದಲ್ಲಿ ಬೇರೆ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಮರಗಳನ್ನು ಹಚ್ಚುವ ಮೂಲಕ ಪರಿಸರ ಬೆಳೆಸಿ ಉಳಿಸಿಕೊಳ್ಳುವ ಮುಖಾಂತರ ಮುಂದೆ ಬರಬೇಕು ಎಂದು ಬುದ್ದಿವಂತ ನಾಗರಿಕರ ಒತ್ತಾಯವಾಗಿದೆ.
ಹೇಳಿಕೆ.
ಅರಣ್ಯ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಜನ ಪ್ರತಿನಿಧಿಗಳು
ರಸ್ತೆಯ ಅಕ್ಕ ಪಕ್ಕ ಗಿಡಗಳನ್ನು
ನೆಟ್ಟು ಪೋಷಿಸಲು ಮುಂದೆ ಆಗಬೇಕು.ಇಲ್ಲವಾದರೆ ವನಸಿರಿ ಸಂಘಟನೆಯ ವತಿಯಿಂದ ಪ್ರತಿಭಟನೆ
ಮಾಡಬೇಕಾಗುತ್ತದೆ ಎಂದು ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರು ತಿಳಿಸಿದ್ದಾರೆ.