ಏಪ್ರಿಲ್ 07. ಸಿರುಗುಪ್ಪ ನಗರದ ದೇಶನೂರು ರಸ್ತೆಯಲ್ಲಿ ತುಂಗಾಭದ್ರ ನದಿ ತೀರದಲ್ಲಿರುವ ಐತಿಹಾಸಿಕ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ರಥೋತ್ಸವ ಅಪಾರ ಭಕ್ತಸಾಗರದ ಸಮ್ಮುಖದಲ್ಲಿ ಗುರುವಾರ ಸಾಯಂಕಾಲ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷದಂತೆ ಜಾತ್ರೋತ್ಸವದ ನಿಮಿತ್ತ ಕಳೆದೆರಡು ದಿನಗಳಿಂದ ದೇಗುಲದಲ್ಲಿ ಅಗ್ನಿಪ್ರವೇಶ, ಪಲ್ಲಕ್ಕಿಸೇವೆ, ಮಹಾ ಪಂಚಾಮೃತಾಭಿಷೇಕ, ವೀಳ್ಯದೆಲೆ, ವಿವಿಧ ಫಲ ಪುಷ್ಪಗಳು, ಆಭರಣಗಳಿಂದ ಶ್ರೀ ಶಂಭುಲಿಂಗೇಶ್ವರ ಸ್ವಾಮಿಗೆ ಅಲಂಕಾರ, ಭಕ್ತರಿಂದ ಕಾಯಿ ಕರ್ಪೂರ, ಎಡೆಯ ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ರಥೋತ್ಸವದ ಹಿನ್ನಲೆ ನಗರ ಹಾಗೂ ಗ್ರಾಮೀಣ ಭಾಗದ ಭಕ್ತರು ತಂಡೋಪ ತಂಡವಾಗಿ ವಾದ್ಯಗಳೊಂದಿಗೆ ಬೃಹದಾಕಾರದ ಪೇಪರ್ ಹಾಗೂ ಪುಷ್ಪ ಮಾಲೆಗಳನ್ನು ಮೆರವಣಿಗೆಯ ಮೂಲಕ ತಂದು ರಥಕ್ಕೆ ಅರ್ಪಿಸಿದರು.
ನಂತರ ಸಾಯಂಕಾಲ ವಿವಿಧ ವಾದ್ಯಗಳೊಂದಿಗೆ ಜರುಗಿದ ರಥೋತ್ಸವದಲ್ಲಿ ಭಾಗವಹಿಸಿದ್ದ ಅಪಾರ ಭಕ್ತರು ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು ಸುತ್ತಮುತ್ತಲಿನ ಗ್ರಾಮಗಳಾದ ದೇಶನೂರು, ಗಡ್ಡೆ ವಿರುಪಾಪುರ, ಕೆಂಚನಗುಡ್ಡ, ದೇವಲಾಪುರ, ಬಾಗೇವಾಡಿ, ಗಜಗಿನಾಳ್, ಅರಳಿಗನೂರು, ಪಪ್ಪನಾಳ್, ಹಳೆಕೋಟೆ ಹಾಗೂ ಇನ್ನಿತರ ಗ್ರಾಮಗಳ ಭಕ್ತರು ಆಗಮಿಸಿ ಭಕ್ತಿಯಿಂದ ತಮ್ಮ ಹರಕೆಗಳನ್ನು ಸಲ್ಲಿಸಿದರು
ವರದಿ.ಸಿ.ಖಾಜಾಮೋಹಿದ್ದೀನ್. ಸಿರುಗುಪ್ಪ