ರಾಯಚೂರು,ಏ.19(ಕವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಏ.19ರ(ಬುಧವಾರ) ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಕಡ್ಡಾಯವಾಗಿ ಮತದಾನ ಮಾಡುವುದಾಗಿ ಹಸ್ತಾಕ್ಷರ(ಸಹಿ) ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಕಡ್ಡಾಯವಾಗಿ ಮತದಾನ ಮಾಡುವ ಕುರಿತಂತೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ವೀಪ್ ರಚನೆಯನ್ನು ಮಾನವ ಸರಪಳಿ ಮೂಲಕ ರಚಿಸಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಹನುಮಂತಪ್ಪ, ಜಿಲ್ಲಾ ಅರಣ್ಯಾಧಿಕಾರಿ ಎ.ಚಂದ್ರಣ್ಣ, ಕೃಷಿ ವಿಶ್ವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ. ಪಾಟೀಲ್, ಸಂಶೋದನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಂ.ಕೆ ನಾಯ್ಕ್, ಕುಲಸಚಿವ ಡಾ.ಎಂ ವೀರನಗೌಡ, ಡಾ.ಗುರುರಾಜ ಸುಂಕದ, ಡಾ.ಸತ್ಯನಾರಾಯಣ ರಾವ್, ಡಾ.ನೇಮಿಚಂದ್ರಪ್ಪ, ಹನುಮೇಶ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.