ಸಿಂಧನೂರು, ಜೂನ್ 23: ತಾಲೂಕಿನ ಆಹಾರ ಇಲಾಖೆಯ ವತಿಯಿಂದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಆಹಾರ ಧಾನ್ಯಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಜುಲೈ 02ರಂದು ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಸಿಂಧನೂರಿನ ಕೆ.ಎಫ್.ಸಿ.ಎಸ್.ಸಿ. ಸಗಟು ಗೋದಾಮಿನಲ್ಲಿ ಜುಲೈ 02ರಂದು ಮಧ್ಯಾಹ್ನ 12 ಗಂಟೆಗೆ ಬಹಿರಂಗ ಹರಾಜು ನಡೆಯಲಿದ್ದು, ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 47.29 ಕ್ವಿಂಟಾಲ್ ಅಕ್ಕಿ ಹಾಗೂ 217.78 ಕ್ವಿಂಟಾಲ್ ಜೋಳವನ್ನು ಹರಾಜು ಮಾಡಲಾಗುತ್ತದೆ ಎಂದು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಾಜಿನಲ್ಲಿ ಭಾಗವಹಿಸಲು ಎಪಿಎಂಸಿ ಪರವಾನಿಗೆ ಹೊಂದಿರುವ ವ್ಯಾಪಾರಿಗಳು, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು, ಕಮಿಷನ್ ಏಜೆಂಟರು, ಅಕ್ಕಿ ಗಿರಣಿ ಮಾಲೀಕರು ಮತ್ತು ದೊಡ್ಡ ಪ್ರಮಾಣದ ಬಳಕೆದಾರ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಬಿಡ್‌ದಾರರು ಹರಾಜು ದಿನ ಬೆಳಿಗ್ಗೆ 11.30 ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಹರಾಜಿನಲ್ಲಿ ಪಾಲ್ಗೊಳ್ಳುವವರು ಜಿಲ್ಲಾಧಿಕಾರಿಗಳು, ರಾಯಚೂರು ಅವರ ಹೆಸರಿನಲ್ಲಿ ₹20,000 ಇ.ಎಂ.ಡಿ. (Earnest Money Deposit) ಮೊತ್ತವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು. ಜೊತೆಗೆ ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು, ವ್ಯಾಪಾರಿ ಅಥವಾ ಸಂಸ್ಥೆಯ ನೋಂದಣಿ ದಾಖಲೆ, ಪರವಾನಿಗೆ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು.

ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗರಿಷ್ಠ ಹಾಗೂ ಎರಡನೇ ಗರಿಷ್ಠ ಬಿಡ್‌ದಾರರನ್ನು ಹೊರತುಪಡಿಸಿ ಉಳಿದವರಿಗೆ ಠೇವಣಿ ಹಣವನ್ನು ಸ್ಥಳದಲ್ಲೇ ಹಿಂದಿರುಗಿಸಲಾಗುವುದು. ಆಯ್ಕೆಯಾದ ಗರಿಷ್ಠ ಬಿಡ್‌ದಾರರು ನಿಗದಿತ ಅವಧಿಯಲ್ಲಿ ಸಂಪೂರ್ಣ ಹಣ ಪಾವತಿಸಲು ವಿಫಲವಾದಲ್ಲಿ ಠೇವಣಿ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದ್ದು, ನಂತರ ಎರಡನೇ ಗರಿಷ್ಠ ಬಿಡ್‌ದಾರರಿಗೆ ಅವಕಾಶ ನೀಡಲಾಗುತ್ತದೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣಗಳಿಗೆ ಒಳಗಾಗಿರುವ ವ್ಯಕ್ತಿಗಳು, ಸಂಸ್ಥೆಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಜಪ್ತಿ ಮಾಡಲಾದ ಧಾನ್ಯಗಳನ್ನು “ಎಲ್ಲಿದೆಯೋ ಅಲ್ಲಿಯೇ ಹಾಗೂ ಹೇಗಿವೆಯೋ ಹಾಗೆಯೇ” ಎಂಬ ಷರತ್ತಿನಡಿ ಹರಾಜು ಮಾಡಲಾಗುತ್ತಿದ್ದು, ಆಸಕ್ತ ಬಿಡ್‌ದಾರರು ಹರಾಜು ದಿನ ಬೆಳಿಗ್ಗೆ 11 ಗಂಟೆಯೊಳಗೆ ಗೋದಾಮಿಗೆ ಭೇಟಿ ನೀಡಿ ಧಾನ್ಯಗಳ ಗುಣಮಟ್ಟ ಪರಿಶೀಲಿಸಬಹುದು. ಹರಾಜಿನಲ್ಲಿ ಬಂದ ಸ್ಪರ್ಧಾತ್ಮಕ ದರಗಳನ್ನು ಒಪ್ಪುವುದು, ತಿರಸ್ಕರಿಸುವುದು ಅಥವಾ ಹರಾಜು ರದ್ದುಪಡಿಸುವ ಅಧಿಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಇರಲಿದೆ. ಜಿಲ್ಲಾಧಿಕಾರಿಗಳ ಅನುಮೋದನೆಯ ಬಳಿಕ ಹರಾಜು ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಿದ ನಂತರವೇ ಹರಾಜಾದ ಧಾನ್ಯಗಳ ಎತ್ತುವಳಿಗೆ ಅವಕಾಶ ನೀಡಲಾಗುತ್ತದೆ.

ಹರಾಜಿನಲ್ಲಿ ಆಯ್ಕೆಯಾದ ಬಿಡ್‌ದಾರರು ಎಪಿಎಂಸಿ ಸೆಸ್ ಸೇರಿದಂತೆ ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಭರಿಸಬೇಕಾಗಿದ್ದು, ಆದೇಶ ನೀಡಿದ ಮೂರು ದಿನಗಳೊಳಗೆ ತಮ್ಮ ಸ್ವಂತ ವೆಚ್ಚದಲ್ಲಿ ಧಾನ್ಯಗಳನ್ನು ಗೋದಾಮಿನಿಂದ ಎತ್ತುವಳಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಯಚೂರು, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಜಿಲ್ಲೆಯ ತಹಶೀಲ್ದಾರರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಸಿಂಧನೂರು ತಹಶೀಲ್ದಾರರು ತಿಳಿಸಿದ್ದಾರೆ.













