
ಮೇ.08 BB NEWS KANNADA
Sindhanur : ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಕಾರು ಹರಿದ ಪರಿಣಾಮ ಒಬ್ಬ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಗಂಗಾವತಿ ಮುಖ್ಯ ರಸ್ತೆಯ ಎವಿಎಸ್ ಬ್ರಿಲಿಯಂಟ್ ಕಾಲೇಜು ಸಮೀಪ ನಡೆದಿದೆ.


ಮೃತ ವಿದ್ಯಾರ್ಥಿನಿಯನ್ನು ಭೂಮಿಕಾ (ಅರಗಿನಮರ ಕ್ಯಾಂಪ್) ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ವಿದ್ಯಾರ್ಥಿನಿಯರಾದ ಮಹೇಶ್ವರಿ, ಮೇಘನಾ ಹಾಗೂ ಜಹೀಬ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಎವಿಎಸ್ ಬ್ರಿಲಿಯಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಮಹೇಂದ್ರ ತಾರ್ ಕಾರು ಏಕಾಏಕಿ ರಿವರ್ಸ್ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ವಿದ್ಯಾರ್ಥಿನಿಯರ ಮೇಲೆ ಹರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾರು ತುರುವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ಮಾಹಿತಿ ತಿಳಿದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಹಾಗೂ ರಾಜುಗೌಡ ಬಾದರ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ನಗರ ಪೊಲೀಸ್ ಠಾಣೆಯ ಪಿಐ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಈ ದುರ್ಘಟನೆ ಇಡೀ ಸಿಂಧನೂರು ತಾಲೂಕಿನ ಜನತೆಯನ್ನು ಮರುಗಿಸಿದೆ. ಪ್ರತಿದಿನವೂ ಶಾಲೆ-ಕಾಲೇಜುಗಳ ಮುಂದೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿರುವ ಹಿನ್ನೆಲೆ, ವಾಹನ ಚಾಲಕರು ಅತೀವ ಎಚ್ಚರಿಕೆಯಿಂದ ವಾಹನ ಚಲಾಯಿಸುವ ಅಗತ್ಯತೆಯನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ವೇಗ ನಿಯಂತ್ರಣ, ಟ್ರಾಫಿಕ್ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ, ಸಿಸಿಟಿವಿ ಅಳವಡಿಕೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

“ಒಂದು ನಿರ್ಲಕ್ಷ್ಯ ಎಷ್ಟು ಕುಟುಂಬಗಳ ಬದುಕನ್ನು ಕತ್ತಲೆಗೆ ತಳ್ಳುತ್ತದೆ ಎಂಬುದಕ್ಕೆ ಈ ಘಟನೆ ಕಣ್ಣೆದುರಿನ ಉದಾಹರಣೆ. ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ” ಎಂದು ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.












