ರಾಯಚೂರು: ಇತಿಹಾಸದ ಪುಟಗಳಲ್ಲಿ ಸಾಹಸ, ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿ ಗುರುತಿಸಿಕೊಂಡಿರುವ ವೀರರಾಣಿ ಒನಕೆ ಓಬವ್ವ ಅವರು ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದ್ದಾರೆ. ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ದೇಶಪ್ರೇಮದ ಗುಣಗಳನ್ನು ಇಂದಿನ ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಹೇಳಿದರು.


ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನವೆಂಬರ್ 11ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನ ಆಸ್ಥಾನದ ಇತಿಹಾಸವು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಹೈದರಾಲಿಯ ಸೈನ್ಯವು ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಕೊನೆಗೆ ಕೋಟೆಯೊಳಗೆ ಕಳ್ಳಮಾರ್ಗದಿಂದ ಪ್ರವೇಶಿಸಲು ಸಂಚು ರೂಪಿಸಿತ್ತು. ಈ ಸಂದರ್ಭದಲ್ಲಿ ಕೋಟೆಯ ಕಾವಲುಗಾರ ಮುದ್ದಹನುಮಪ್ಪ ಊಟಕ್ಕೆ ತೆರಳಿದ್ದಾಗ ಕೋಟೆಯೊಳಗೆ ನುಗ್ಗುತ್ತಿದ್ದ ಶತ್ರು ಸೈನಿಕರನ್ನು ಒನಕೆಯಿಂದ ಎದುರಿಸಿದ ಓಬವ್ವ, ಒಬ್ಬೊಬ್ಬರಾಗಿ ಅವರನ್ನು ಹಿಮ್ಮೆಟ್ಟಿಸಿ ಕೋಟೆಯನ್ನು ರಕ್ಷಿಸಿದ ಸಾಹಸಗಾಥೆ ರೋಮಾಂಚನಕಾರಿಯಾಗಿದೆ ಎಂದರು.


ಒಬ್ಬ ಸಾಮಾನ್ಯ ಮಹಿಳೆ ತನ್ನ ಪ್ರಾಣವನ್ನೇ ಲೆಕ್ಕಿಸದೆ ನಾಡಿನ ರಕ್ಷಣೆಗಾಗಿ ಹೋರಾಡಿದ ಇತಿಹಾಸವು ಇಂದಿನ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಮಹಿಳೆಯರು ವೀರಮಾತೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಧೈರ್ಯದಿಂದ ಮುನ್ನಡೆಯಬೇಕು. ಸರ್ಕಾರದ ಕಾನೂನುಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಒನಕೆ ಓಬವ್ವ ಸಾಮಾನ್ಯ ಕುಟುಂಬದ ಅಸಾಮಾನ್ಯ ಧೀರ ಮಹಿಳೆ: ತಹಶೀಲ್ದಾರ್
ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ, ದೇಶದ ರಕ್ಷಣೆಗಾಗಿ ಒನಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಧೀರ ಮಹಿಳೆ ಒನಕೆ ಓಬವ್ವ. ರಾಜವಂಶದಲ್ಲಿ ಜನಿಸಿದ ರಾಣಿಯರು ಯುದ್ಧಕಲೆ ಮತ್ತು ಸೈನಿಕ ತರಬೇತಿ ಪಡೆದು ಶತ್ರುಗಳನ್ನು ಎದುರಿಸಿದ ಇತಿಹಾಸವನ್ನು ನಾವು ಕಾಣುತ್ತೇವೆ. ಆದರೆ, ಒನಕೆ ಓಬವ್ವ ಯಾವುದೇ ರಾಜವಂಶದಲ್ಲಿ ಜನಿಸಿದವರಲ್ಲ. ಅವರಿಗೆ ಸೈನಿಕ ತರಬೇತಿಯೂ ಇರಲಿಲ್ಲ, ಶಸ್ತ್ರಾಸ್ತ್ರಗಳನ್ನು ಬಳಸುವ ಅಭ್ಯಾಸವೂ ಇರಲಿಲ್ಲ. ಸಾಮಾನ್ಯ ಕುಟುಂಬದ ಮಹಿಳೆಯಾಗಿದ್ದ ಅವರು, ದೇಶಕ್ಕೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ತಮ್ಮ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಶತ್ರು ಸೈನ್ಯವನ್ನು ಎದುರಿಸಿದರು ಎಂದು ಹೇಳಿದರು. ಮದಕರಿ ನಾಯಕನ ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರಾಲಿಯ ಸೈನ್ಯ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ, ಕೋಟೆಯೊಳಗೆ ನುಗ್ಗುತ್ತಿದ್ದ ಶತ್ರು ಸೈನಿಕರನ್ನು ಒನಕೆಯಿಂದ ಎದುರಿಸಿ ನಾಡಿನ ರಕ್ಷಣೆ ಮಾಡಿದ ಓಬವ್ವ ಅವರ ಸಾಹಸ ಅನನ್ಯವಾದುದು. ಇಂತಹ ವೀರ ವನಿತೆಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಅಗತ್ಯ: ಡಾ. ಶರಣಪ್ಪ ಚಲವಾದಿ
ಉಪನ್ಯಾಸ ನೀಡಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ. ಶರಣಪ್ಪ ಚಲವಾದಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆಯರು ತಮ್ಮ ಆತ್ಮಗೌರವ, ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ ಒನಕೆ ಓಬವ್ವ ಅವರಂತೆ ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆಯಿಂದ ಮುನ್ನಡೆಯಬೇಕು. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಧೈರ್ಯದಿಂದ ನಿಲ್ಲುವ ಗುಣವೇ ನಿಜವಾದ ಸ್ತ್ರೀಶಕ್ತಿಯ ಪ್ರತೀಕವಾಗಿದೆ ಎಂದರು.


ವೀರರಾಣಿ ಒನಕೆ ಓಬವ್ವ ಭಾವಚಿತ್ರದೊಂದಿಗೆ ಮೆರವಣಿಗೆ
ಜಯಂತಿ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವೀರರಾಣಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಹಾಗೂ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಸೇರಿದಂತೆ ವಿವಿಧ ಗಣ್ಯರು ಮತ್ತು ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗದ ಮೂಲಕ ಸಾಗಿಬಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ ತಲುಪಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಭಿಯಂತರ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೋಮಿನಿ, ಲಲಿತಾ ಅಂಜಿನೇಯ, ಜಗನ್ನಾಥ ಸುಂಕರಿ, ಅರ್ಚನಾ ಸುಂಕರಿ, ಸಂತೋಷ ನಂದಿ, ಮಾರೆಪ್ಪ, ಎಂ. ವಸಂತ, ದಯಾನಂದ, ಶಿವರಾಜ್, ವಿಶ್ವನಾಥ, ದೇವಿಂದ್ರ, ರಾಘವೇಂದ್ರ, ಭೀಮಣ್ಣ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.












