ಮಾನ್ವಿ . ಅಪಘಾತ ತಡೆಗಟ್ಟಲು ಹಾಗೂ ಮೂಕ ಪ್ರಾಣಿಗಳ ರಕ್ಷಣೆಗೆ ವಿನೂತನ ಹೆಜ್ಜೆ; ಟ್ರಸ್ಟ್‌ನ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ರಸ್ತೆ ಸುರಕ್ಷತೆ ಹಾಗೂ ಮೂಕ ಪ್ರಾಣಿಗಳ ರಕ್ಷಣೆಯ ಉದ್ದೇಶದಿಂದ ಶ್ರೀ ರಾಘವೇಂದ್ರ ವಕೀಲರು ಚಾರಿಟೇಬಲ್ ಟ್ರಸ್ಟ್ ವತಿಯಿಂದ 100 ಬೀದಿ ಹಸುಗಳ ಕುತ್ತಿಗೆಗೆ ರೇಡಿಯಂ ರಿಫ್ಲೆಕ್ಟಿವ್ ಬೆಲ್ಟ್‌ಗಳನ್ನು ಅಳವಡಿಸುವ ಮೂಲಕ ಗಮನಾರ್ಹ ಸಮಾಜಮುಖಿ ಕಾರ್ಯ ಕೈಗೊಳ್ಳಲಾಗಿದೆ.
https://youtu.be/7SGAg-gAOfE?si=k47dTYM44X2rsqn-
ರಸ್ತೆಗಳಲ್ಲಿ ಸಂಚರಿಸುವ ಬೀದಿ ಹಸುಗಳು ರಾತ್ರಿ ವೇಳೆ ವಾಹನ ಸವಾರರಿಗೆ ಸರಿಯಾಗಿ ಕಾಣಿಸದೆ ಅನೇಕ ಸಂದರ್ಭಗಳಲ್ಲಿ ಅಪಘಾತಗಳಿಗೆ ಕಾರಣವಾಗುತ್ತವೆ. ಇಂತಹ ಅಪಘಾತಗಳಿಂದ ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವುದಲ್ಲದೆ, ವಾಹನ ಸವಾರರು ಕೂಡ ಗಾಯಗೊಂಡು ಸಂಕಷ್ಟಕ್ಕೆ ಸಿಲುಕುವ ಘಟನೆಗಳು ನಡೆಯುತ್ತಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಸ್ಟ್‌ನ ಅಧ್ಯಕ್ಷರಾದ ರಾಘವೇಂದ್ರ ವಕೀಲರು, ಅಪಘಾತಗಳನ್ನು ತಡೆಗಟ್ಟುವ ಹಾಗೂ ಪ್ರಾಣಿಗಳ ಜೀವ ರಕ್ಷಿಸುವ ಸದುದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿಂದೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ ಹಸುಗಳನ್ನು ಹಾಗೂ ಅಪಘಾತಗಳಿಂದ ಗಾಯಗೊಂಡು ತೊಂದರೆ ಅನುಭವಿಸುತ್ತಿದ್ದ ಪ್ರಯಾಣಿಕರನ್ನು ಕಂಡು ಮನನೊಂದಿದ್ದ ರಾಘವೇಂದ್ರ ವಕೀಲರು, ಬೀದಿ ಹಸುಗಳಿಂದ ಉಂಟಾಗುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಆಗ್ರಹಿಸಿದ್ದರು. ಆದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕೆಂಬ ಆಶಯದಿಂದ ಇದೀಗ ಸ್ವತಃ ಕಾರ್ಯಪ್ರವೃತ್ತರಾಗಿದ್ದಾರೆ.

ಶ್ರೀ ರಾಘವೇಂದ್ರ ವಕೀಲರು ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯ ನಂತರ ಕೈಗೊಂಡ ಮೊದಲ ಸಾಮಾಜಿಕ ಕಾರ್ಯವಾಗಿ 100 ಬೀದಿ ಹಸುಗಳ ಕುತ್ತಿಗೆಗೆ ರೇಡಿಯಂ ರಿಫ್ಲೆಕ್ಟಿವ್ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಈ ಬೆಲ್ಟ್‌ಗಳು ರಾತ್ರಿ ವೇಳೆ ವಾಹನಗಳ ಬೆಳಕು ಬಿದ್ದಾಗ ಪ್ರತಿಫಲಿಸುವುದರಿಂದ ರಸ್ತೆಯಲ್ಲಿ ಇರುವ ಹಸುಗಳು ವಾಹನ ಸವಾರರಿಗೆ ದೂರದಿಂದಲೇ ಗೋಚರಿಸಲು ಸಹಕಾರಿಯಾಗುತ್ತವೆ. ಇದರಿಂದ ಚಾಲಕರು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗಲಿದ್ದು, ಹಸುಗಳು ಹಾಗೂ ವಾಹನ ಸವಾರರ ಸುರಕ್ಷತೆಗೆ ನೆರವಾಗಲಿದೆ. ಮೂಕ ಪ್ರಾಣಿಗಳ ಜೀವ ರಕ್ಷಿಸುವುದರ ಜೊತೆಗೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಈ ಕಾರ್ಯವು ಸಾಮಾಜಿಕ ಕಾಳರಿ ಮತ್ತು ಮಾನವೀಯತೆಯ ಪ್ರತೀಕವಾಗಿದೆ. ಕೇವಲ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದಷ್ಟೇ ಅಲ್ಲದೆ, ಸಮಸ್ಯೆ ಪರಿಹಾರಕ್ಕೆ ಸ್ವತಃ ಮುಂದಾಗಿರುವ ಟ್ರಸ್ಟ್‌ನ ಪ್ರಯತ್ನಕ್ಕೆ ಸ್ಥಳೀಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಉಪಯುಕ್ತವಾಗುವಂತಹ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಬೆಂಬಲ, ಸಹಕಾರ ಹಾಗೂ ಪ್ರೋತ್ಸಾಹ ನೀಡುವಂತೆ ಟ್ರಸ್ಟ್‌ನ ಸಂಸ್ಥಾಪಕರು ಮನವಿ ಮಾಡಿದ್ದಾರೆ. ಮೂಕ ಪ್ರಾಣಿಗಳ ರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಒಂದೇ ಕಾರ್ಯದ ಮೂಲಕ ಸಾಧಿಸಲು ಪ್ರಯತ್ನಿಸಿರುವ ಶ್ರೀ ರಾಘವೇಂದ್ರ ವಕೀಲರು ಚಾರಿಟೇಬಲ್ ಟ್ರಸ್ಟ್‌ನ ಈ ಮೊದಲ ಹೆಜ್ಜೆ, ಸಮಾಜದಲ್ಲಿ ಪ್ರಾಣಿ ದಯೆ ಹಾಗೂ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರೇರಣೆಯಾಗಿದೆ.












