ಸಿಂಧನೂರಿನಲ್ಲಿ ಸೆ.23ರಿಂದ ಉದ್ಯಮಶೀಲತಾ ತರಬೇತಿ
ರಾಯಚೂರು: ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗಳಿಗಾಗಿ ಸಿಂಧನೂರಿನಲ್ಲಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ — ಸಿಡಾಕ್, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.
2026ರ ಸೆಪ್ಟೆಂಬರ್ 23ರಿಂದ ಸಿಂಧನೂರಿನಲ್ಲಿ ತರಬೇತಿ ಆರಂಭವಾಗಲಿದೆ.ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಉದ್ಯಮಶೀಲತೆಯ ಗುಣಲಕ್ಷಣಗಳು, ಸರ್ಕಾರದ ವಿವಿಧ ಯೋಜನೆಗಳು, ಬ್ಯಾಂಕ್ ವ್ಯವಹಾರ ಹಾಗೂ ಸಾಲ ಸೌಲಭ್ಯಗಳು ಸೇರಿದಂತೆ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಈ ತರಬೇತಿಗೆ ರಾಯಚೂರು ಜಿಲ್ಲೆಯ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 18ರಿಂದ 40 ವರ್ಷ ವಯಸ್ಸಿನವರಾಗಿದ್ದು, ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಸೆಪ್ಟೆಂಬರ್ 22ರೊಳಗೆ 9986600631 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಅಥವಾ ಸಿಡಾಕ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ನವೀನ ಆಸ್ಪತ್ರೆ ಪಕ್ಕ, ರಾಯಚೂರು ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಸಿಡಾಕ್ ತರಬೇತಿದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.













