ಸಿಂಧನೂರು: ವೈದ್ಯಕೀಯ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ಸಾಧ್ಯತೆಗಳು, ಅನುಷ್ಠಾನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳ ಕುರಿತು ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪ್ರಥಮ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನದಲ್ಲಿ ಮಹತ್ವದ ವಿಚಾರಗೋಷ್ಠಿ ನಡೆಯಿತು.
ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಸಮ್ಮೇಳನದಲ್ಲಿ ಸಿಂಧನೂರಿನ ಮಕ್ಕಳ ತಜ್ಞರಾದ ಡಾ. ಕೆ. ಶಿವರಾಜ್ ಪಾಟೀಲ್ ಅವರು ಭಾಗವಹಿಸಿ, ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಅಗತ್ಯತೆ ಹಾಗೂ ಅದರ ಅನುಷ್ಠಾನದ ಕುರಿತು ತಮ್ಮ ಮಹತ್ವದ ವಿಚಾರಗಳನ್ನು ಮಂಡಿಸಿದರು.
ವೈದ್ಯಕೀಯ ಶಿಕ್ಷಣವು ಮಾತೃಭಾಷೆಯಲ್ಲಿ ದೊರೆಯುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯಕೀಯ ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿ ಪರಿಚಯಿಸುವುದು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಳ ಕನ್ನಡದಲ್ಲಿ ವೈದ್ಯಕೀಯ ಜ್ಞಾನವನ್ನು ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ತಾಂತ್ರಿಕ ಪದಗಳನ್ನು ಕನ್ನಡೀಕರಿಸುವಾಗ ವೈಜ್ಞಾನಿಕ ಅರ್ಥ ಮತ್ತು ನಿಖರತೆ ಕಾಪಾಡಿಕೊಳ್ಳುವುದು, ಪಠ್ಯಪುಸ್ತಕಗಳ ಲಭ್ಯತೆ, ಬೋಧನಾ ವಿಧಾನಗಳು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಕ್ರಮಗಳ ಕುರಿತು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಧಿಕಾರದ ಸದಸ್ಯರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಪ್ರಶಾಂತ್ ಬಿಳಿಮಲೆ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಚ್ಚಿದಾನಂದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಕನ್ನಡ ಭಾಷೆಯಲ್ಲಿಯೇ ವೈದ್ಯಕೀಯ ಜ್ಞಾನವನ್ನು ಕಲಿಯಲು, ಬೋಧಿಸಲು ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ತಲುಪಿಸಲು ಇರುವ ಅವಕಾಶಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.
ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳ ವಿಷಯ ಗ್ರಹಿಕೆ, ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಹಾಗೂ ಆರೋಗ್ಯ ಜಾಗೃತಿ ಹೆಚ್ಚಲು ಸಹಕಾರಿಯಾಗುತ್ತದೆ ಎಂಬ ಆಶಯ ವಿಚಾರಗೋಷ್ಠಿಯಲ್ಲಿ ವ್ಯಕ್ತವಾಯಿತು. ವೈದ್ಯಕೀಯ ಕ್ಷೇತ್ರದಂತಹ ತಾಂತ್ರಿಕ ಮತ್ತು ಜ್ಞಾನಾಧಾರಿತ ಕ್ಷೇತ್ರದಲ್ಲಿಯೂ ಕನ್ನಡ ಭಾಷೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಈ ಸಮ್ಮೇಳನ ಗಮನ ಸೆಳೆಯಿತು. ಸಿಂಧನೂರಿನ ವೈದ್ಯರು ರಾಜ್ಯಮಟ್ಟದ ಕನ್ನಡ ವೈದ್ಯಕೀಯ ಶಿಕ್ಷಣದ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿರುವುದು ಸ್ಥಳೀಯವಾಗಿ ವಿಶೇಷ ಗಮನ ಸೆಳೆದಿದೆ.












