ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಿಬ್ಬಂದಿಗಳ ಕಿರಿಕಿರಿ? ಹಳ್ಳಿಗಳಲ್ಲಿ ಬಸ್ ನಿಲುಗಡೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ – ಶಾಸಕರ ಸೂಚನೆಯೂ ಇನ್ನೂ ಜಾರಿಗೆ ಬಂದಿಲ್ಲ ಎಂಬ ಆರೋಪ

ಸಿಂಧನೂರು: ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸಿಬ್ಬಂದಿಯಿಂದ ಅನಗತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಸಿಂಧನೂರಿನಿಂದ ಮಸ್ಕಿ, ಒಳಬಳ್ಳಾರಿ, ಮಾನ್ವಿ, ಕಾರಟಗಿ ಹಾಗೂ ಸಿರುಗುಪ್ಪ ಮಾರ್ಗಗಳಲ್ಲಿ ಸಂಚರಿಸುವ ಅನೇಕ ಬಸ್‌ಗಳು ಮಧ್ಯದಲ್ಲಿರುವ ಹಲವು ಹಳ್ಳಿಗಳಲ್ಲಿ ನಿಲುಗಡೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಸಿಂಧನೂರು–ಮಸ್ಕಿ ಮಾರ್ಗದಲ್ಲಿ ಕಲ್ಲೂರು, ಪಗಡದಿನ್ನಿ, ಕುನ್ನಟಗಿ, ಬಸಾಪುರ, ತಲೆಕೂಡ್ಲಿಗಿ, ಮುದ್ದಾಪುರ, ಗುಡದೂರು ಸೇರಿದಂತೆ ಹಲವು ಗ್ರಾಮಗಳು ಇದ್ದರೂ, ಎಲ್ಲ ಗ್ರಾಮಗಳಲ್ಲೂ ಬಸ್ ನಿಲ್ಲಿಸದೆ ಕೆಲವೇ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿಗಳ ಹೇಳಿಕೆಯ ಪ್ರಕಾರ, ಬಸ್ ನಿಲ್ಲಿಸುವಂತೆ ಕೇಳಿದಾಗ ಕೆಲ ಚಾಲಕರು ಹಾಗೂ ನಿರ್ವಾಹಕರು, "ಯಾಕೆ ಬರುತ್ತೀರಿ?", "ದೊಡ್ಡ ದೊಡ್ಡ ಬ್ಯಾಗ್‌ಗಳನ್ನು ಹೊತ್ತುಕೊಂಡು ಬರುತ್ತೀರಿ", "ಸಾರ್ವಜನಿಕರಿಗೆ ತೊಂದರೆ ಆಗುತ್ತದೆ", "ಪಾಸ್ ಇದೆ ಅಲ್ವಾ, ಹಿಂದಿನ ಬಸ್‌ನಲ್ಲಿ ಬನ್ನಿ" ಎಂಬ ರೀತಿಯ ಮಾತುಗಳ ಮೂಲಕ ಗದರಿಸಿ ಮಾನಸಿಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇಂತಹ ವರ್ತನೆಯಿಂದ ಪ್ರತಿನಿತ್ಯ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಆತಂಕ ಮತ್ತು ಅವಮಾನ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶಾಸಕರ ಸೂಚನೆಗೂ ಜಾರಿಗೆ ಬಂದಿಲ್ಲವೇ?
ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಬಸ್ ಸೌಲಭ್ಯ ಕಲ್ಪಿಸುವಂತೆ ಖಾಸಗಿ ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದರು ಎಂದು ತಿಳಿಸಲಾಗಿದೆ. ಆದರೆ, ಆ ಸೂಚನೆ ನೀಡಿದ ಬಳಿಕವೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮ್ಯಾನೇಜರ್ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಯ ಸೂಚನೆಯೂ ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿಯಾಗಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಇಂದಿಗೂ ಪ್ರತಿದಿನ ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.

ತಕ್ಷಣ ಕ್ರಮಕ್ಕೆ ಆಗ್ರಹ
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಅಗತ್ಯವಿರುವ ಗ್ರಾಮಗಳಿಗೆ ನಿಯಮಿತ ಬಸ್ ನಿಲುಗಡೆ ಮತ್ತು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಬಸ್ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಸೂಚನೆ ನೀಡಬೇಕು. ಜೊತೆಗೆ ಮಾನ್ಯ ಶಾಸಕರು ನೀಡಿರುವ ನಿರ್ದೇಶನವನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮ್ಯಾನೇಜರ್ ತಕ್ಷಣ ಜಾರಿಗೆ ತಂದು ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಹಾಗೂ ಖಾಸಗಿ ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳ ಸದಸ್ಯರು ಆಗ್ರಹಿಸಿದ್ದಾರೆ.













