ಅಬಕಾರಿ ಇಲಾಖೆಗೆ ದೂರು ಕೊಟ್ಟರೆ ಮಾತ್ರ ಅಕ್ರಮ ಮದ್ಯ ಮಾರಾಟ ಬಂದ್ ಆಗುತ್ತದೆಯೇ..?
ಗೋಮರ್ಸಿ ಗ್ರಾಮ ಘಟನೆ ನಂತರ ಸಿಂಧನೂರು ತಾಲೂಕಿನಲ್ಲಿ ಸಾರ್ವಜನಿಕರ ಕಠಿಣ ಪ್ರಶ್ನೆ
ಫೆಬ್ರುವರಿ,01
ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ “ಬೀರು ಬೇಡ – ಶಿಕ್ಷಣ ಬೇಕು” ಎಂಬ ಘೋಷಣೆಯೊಂದಿಗೆ ಮಹಿಳೆಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಮಾತ್ರ ಅಬಕಾರಿ ಇಲಾಖೆ ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಂಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆ ಒಂದೆಡೆ ಸ್ವಾಗತಾರ್ಹವಾಗಿದ್ದರೂ, ಇನ್ನೊಂದೆಡೆ “ದೂರು ಕೊಟ್ಟರೆ ಮಾತ್ರವೇ ಆಡಳಿತ ಕಾರ್ಯನಿರ್ವಹಿಸುತ್ತದೆಯೇ?” ಎಂಬ ಗಂಭೀರ ಪ್ರಶ್ನೆಯನ್ನು ಸಾರ್ವಜನಿಕರ ಮುಂದಿಟ್ಟಿದೆ.
173 ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಆಡಳಿತಕ್ಕೆ ಕಾಣುತ್ತಿಲ್ಲವೇ..?
2011ರ ಜನಗಣತಿ ಪ್ರಕಾರ ಸಿಂಧನೂರು ತಾಲೂಕಿನಲ್ಲಿ ಒಟ್ಟು 174 ಹಳ್ಳಿಗಳು ಇವೆ. ಗೋಮರ್ಸಿ ಗ್ರಾಮದಲ್ಲಿ ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ ಅಂದರೆ, ಉಳಿದ 173 ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ, ಡಬ್ಬ ಅಂಗಡಿಗಳಲ್ಲಿ, ಪಾನ್ ಶಾಪ್‌ಗಳಲ್ಲಿ, ಎಗ್ ರೈಸ್ ಬಂಡಿಗಳಲ್ಲಿ, ಸರ್ಕಾರಿ ಶಾಲೆಗಳ ಮುಂಭಾಗದಲ್ಲೇ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದು ಅಬಕಾರಿ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ಕಾಣುತ್ತಿಲ್ಲವೇ..? ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.
ಸರ್ಕಾರಿ ಶಾಲೆಗಳ ಮುಂದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭಾರೀ ಅಪಾಯ ಎದುರಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿತದ ಚಟ ಹೆಚ್ಚಾಗಿ, ಮಹಿಳೆಯರು ಮತ್ತು ಮಕ್ಕಳ ಜೀವನ ದುಸ್ಥಿತಿಗೆ ತಲುಪುತ್ತಿರುವುದು ಬಹಿರಂಗ ಸತ್ಯ.
ದೂರು ಬಂದಾಗ ಮಾತ್ರ ಕಾರ್ಯಾಚರಣೆ – ಇದೇ ಆಡಳಿತದ ನೀತಿಯೇ..?
ಗೋಮರ್ಸಿ ಗ್ರಾಮದ ಮಹಿಳೆಯರು ಹೋರಾಟ ನಡೆಸಿ ದೂರು ನೀಡಿದ ನಂತರ ಮಾತ್ರ ಅಬಕಾರಿ ಇಲಾಖೆ ಮತ್ತು ತಾಲೂಕು ಆಡಳಿತ ಚಟುವಟಿಕೆಗೆ ಇಳಿದಿರುವುದು, ಉಳಿದ ಗ್ರಾಮಗಳ ಬಗ್ಗೆ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
“ಪ್ರತಿ ಹಳ್ಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅಬಕಾರಿ ಇಲಾಖೆಯ ಕರ್ತವ್ಯವಲ್ಲವೇ?
ದೂರು ಕೊಡದೇ ಇದ್ದರೆ ಅಕ್ರಮ ಮದ್ಯ ಮಾರಾಟಕ್ಕೆ ಮೌನ ಅನುಮತಿಯೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಾನೂನುಬದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ತಕ್ಷಣವೇ ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡು,
ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ
ಗಲ್ಲಿ ಗಲ್ಲಿಗಳಲ್ಲಿ, ಪಾನ್ ಶಾಪ್‌ಗಳಲ್ಲಿ, ಡಬ್ಬ ಅಂಗಡಿಗಳಲ್ಲಿ
ಸರ್ಕಾರಿ ಶಾಲೆಗಳ ಮುಂದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ
ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕೇವಲ ತಾತ್ಕಾಲಿಕ ಕಾರ್ಯಾಚರಣೆ ಅಲ್ಲದೆ, ಶಾಶ್ವತ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ಹಿಡಿದು ತಾಲೂಕು ಆಡಳಿತ ಮತ್ತು ಅಬಕಾರಿ ಇಲಾಖೆ ತನಕ ಸ್ಪಷ್ಟ ಹಾಗೂ ದಿಟ್ಟ ಕ್ರಮ ನಿರೀಕ್ಷಿಸಲಾಗಿದೆ.
ಎಚ್ಚೆತ್ತುಕೊಳ್ಳುವರೇ ಆಡಳಿತ ಮತ್ತು ಅಬಕಾರಿ ಇಲಾಖೆ..?
ಗೋಮರ್ಸಿ ಗ್ರಾಮದ ನಂತರ ಉಳಿದ ಎಲ್ಲಾ ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆಯೇ?
ಅಥವಾ ದೂರು ಕೊಟ್ಟ ಗ್ರಾಮಗಳಿಗೆ ಮಾತ್ರವೇ ನ್ಯಾಯ ಸಿಗುತ್ತದೆಯೇ?
ಇದೀಗ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುತ್ತವೆಯೇ ಅಥವಾ ಸಾರ್ವಜನಿಕರ ಸಹನೆ ಪರೀಕ್ಷೆ ಮುಂದುವರಿಯುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.













